ಫೆ.21, 22ರಂದು ಬೂದನೂರು ಉತ್ಸವ: ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ

ಮಂಡ್ಯದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಅಧ್ಯಕ್ಷತೆಯಲ್ಲಿ ಬೂದನೂರು ಉತ್ಸವದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಮಂಡ್ಯದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಅಧ್ಯಕ್ಷತೆಯಲ್ಲಿ ಬೂದನೂರು ಉತ್ಸವದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಬೂದನೂರು ಗ್ರಾಮದಲ್ಲಿ ಎರಡು ದಿನದ ಉತ್ಸವ
  • ಈ ವರ್ಷ ಹೆಲಿಟೂರಿಸಂ ಮೆರುಗು
  • ಶಾಸಕ ರವಿಕುಮಾರ್ ನೇತೃತ್ವದಲ್ಲಿ ಸಭೆ
ಮಂಡ್ಯ: ಕಳೆದ ಬಾರಿಯಂತೆ ಈ ಸಲವೂ ಬೂದನೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೂದನೂರು ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಬಾರಿ ಸರ್ಕಾರದಿಂದ 15 ಲಕ್ಷ ರೂ ಮಾತ್ರ ಬೂದನೂರು ಉತ್ಸವಕ್ಕೆ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ ಯಾರಿಂದಲೂ ಹಣ ಕೇಳದೆ 1 ಕೋಟಿ ರೂ ವೆಚ್ಚದಲ್ಲಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗಿತ್ತು ಎಂದು ಹೇಳಿದರು.
ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಸಹಕಾರದಿಂದ ಫೆ.21, 22ರಂದು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸೋಣ. ಕೇರಳದಲ್ಲಿ ಬಿಟ್ಟರೆ ಅನಂತಪದ್ಮನಾಭ ದೇವಾಲಯ ಇರುವುದು ಮಂಡ್ಯ ಜಿಲ್ಲೆಯ ಬೂದನೂರಿನಲ್ಲಿ ಮಾತ್ರ. ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಬೂದನೂರು ಉತ್ಸವಕ್ಕೆ ಬರಲು ಸಾರ್ವಜನಿಕರಿಗೆ ವಾಹನಗಳ ಸೌಲಭ್ಯ ಹಾಗೂ ವಾಹನಗಳಿಗೆ ಅಚ್ಚುಕಟ್ಟಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ವಿವಿಧ ಕಲಾತಂಡಗಳೊಂದಿಗೆ ಹಳೇ ಬೂದನೂರಿನಿಂದ ಮೆರವಣಿಗೆ ಪ್ರಾರಂಭವಾಗಲಿದೆ. ಸ್ಥಳೀಯರು ಸಹಕರಿಸಿದರೆ 37 ಪೂಜಾ ಕುಣಿತ ತಂಡಗಳನ್ನು ಮೆರವಣಿಗೆಯಲ್ಲಿ ಆಯೋಜಿಸಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗುವುದು. ಆಹಾರ ಮೇಳವನ್ನು ಸಹ ಉತ್ಸವದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಕಸಬಾ ಹೋಬಳಿ ಪ್ರತಿ ಮನೆಯಿಂದ ರಂಗೋಲಿ ಸ್ಪರ್ಧೆ ಆಯೋಜಿಸಲಾಗುವುದು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮೂರು ಜನರಿಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲ ಸ್ಪರ್ದಾಳುಗಳಿಗೆ ವೈಯಕ್ತಿಕವಾಗಿ ನನ್ನ ಕಡೆಯಿಂದ ವಿಶೇಷ ಉಡುಗೊರೆ ನೀಡಲಾಗುವುದು. ಮಕ್ಕಳಿಗೆ ಚಿತ್ರ ಕಲೆ ಸ್ಪರ್ಧೆ ಆಯೋಜನೆ ವಿಜೇತರಿಗೆ ನಗದು ಬಹುಮಾನ ಮತ್ತು ಭಾಗವಹಿಸಿದವರಿಗೆ ಉಡುಗೊರೆಯನ್ನು ನೀಡಲಾಗುವುದು. ಉತ್ಸವದಲ್ಲಿ ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೀಡಲಾಗುವುದು. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, 2024ರಲ್ಲಿ ಬೂದನೂರು ಉತ್ಸವವನ್ನು ಯಶಸ್ವಿಯಾಗಿ ಆಚರಣೆ ಮಾಡಲಾಗಿತ್ತು. ಬೂದನೂರಿನ ಕಾಶಿ ವಿಶ್ವನಾಥ ಮತ್ತು ಅನಂತಪದ್ಮನಾಭ ದೇವಸ್ಥಾನದ ವಾಸ್ತು ಶಿಲ್ಪ ಬೆಲೂರು ಹಳೆಬೀಡಿನಷ್ಟೆ ಸುಂದರವಾಗಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ದೇವಾಲಯಗಳಾಗಿ ಹೊರಹೊಮ್ಮಿದೆ. ದೇವಾಲಯದ ಕಲೆ ವಾಸ್ತುಶಿಲ್ಪವನ್ನು ಉಳಿಸಬೇಕು ಎಂಬ ಸದುದ್ದೇಶದಿಂದ ಶಾಸಕ ರವಿಕುಮಾರ್ ಅವರು ಬೂದನೂರು ಉತ್ಸವವನ್ನು ಆಚರಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಬೂದನೂರು ಉತ್ಸವದ ಪೂರ್ವ ತಯಾರಿಗಾಗಿ ಈಗಾಗಲೇ ಸ್ವಾಗತ ಸಮಿತಿ, ವೇದಿಕೆ ಸಮಿತಿ ಸೇರಿದಂತೆ ಸಮಿತಿಗಳನ್ನು ರಚಿಸಲಾಗಿದೆ. ಬೂದನೂರು ಉತ್ಸವದಲ್ಲಿ ಸ್ಥಳೀಯರಿಗೆ ದೇಸಿ ಕ್ರೀಡೆಗಳನ್ನು ಆಯೋಜಿಸಲಾಗುವುದು. ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುವುದು. ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮಹಿಳೆಯರು ಮತ್ತು ಸಾರ್ವಜನಿಕರಿಗೆ ಪ್ರೋತ್ಸಾಹ ನೀಡಲು ರಂಗೋಲಿ, ಚಿತ್ರ ಕಲೆ, ಅಗ್ಗ ಜಗ್ಗಾಟ. ಕಬ್ಬಡಿ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಗ್ರಾಮಸ್ಥರು ಮತ್ತು ಸ್ಥಳೀಯ ಮುಖಂಡರು ಉತ್ಸವವನ್ನು ತಮ್ಮ ಮನೆಯ ಕಾರ್ಯಕ್ರಮ ಎಂದು ಭಾವಿಸಿ. ಮನಸ್ಥಾಪ ಬಿಟ್ಟು ಉತ್ಸವವನ್ನು ಯಶಸ್ವಿಯಾಗಿ ಆಚರಣೆ ಮಾಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ತಹಸೀಲ್ದಾರ್ ವಿಶ್ವನಾಥ್, ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಿಪಂ ಮಾಜಿ ಸದಸ್ಯ ಯೋಗೇಶ್ ಇತರರಿದ್ದರು. ಇದೇ ವೇಳೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ನೆನಪಿಗಾಗಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

ಮೂರು ದಿನ ಹೆಲಿಟೂರಿಸಂ
ಪ್ರವಾಸಿಗರು ಹಾಗೂ ಸ್ಥಳೀಯರಿಗಾಗಿ ಈ ವರ್ಷದ ಉತ್ಸವದಲ್ಲಿ ಫೆ.20 ರಿಂದ 3 ದಿನಗಳ ಕಾಲ ಹೆಲಿಟೂರಿಸಂ ಆಯೋಜನೆ ಮಾಡಲಾಗುತ್ತದೆ. ಸ್ಥಳೀಯರು ಹಾಗೂ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಬೆಲೆ ನಿಗದಿಪಡಿಸಲಾಗುವುದು. ಹೆಲಿಕಾಪ್ಟರ್ ಮೇಲಿಂದ ಸಾರ್ವಜನಿಕರು ಬುದನೂರು ಉತ್ಸವವನ್ನು ಕಣ್ತುಂಬಿಕೊಳ್ಳಬಹುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net