ಶ್ರೀ ಕಾಶಿ ವಿಶ್ವೇಶ್ವರಸ್ವಾಮಿಯ ಬ್ರಹ್ಮರಥೋತ್ಸವ

 ಮಹದೇವಪುರ ಗ್ರಾಮದಲ್ಲಿ ಗುರುವಾರ ಶ್ರೀ ಕಾಶಿವಿಶ್ವೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ನಡೆಯಿತು.
ಮಹದೇವಪುರ ಗ್ರಾಮದಲ್ಲಿ ಗುರುವಾರ ಶ್ರೀ ಕಾಶಿವಿಶ್ವೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ನಡೆಯಿತು.
Published on
ಶ್ರೀರಂಗಪಟ್ಟಣ: ತಾಲೂಕಿನ ಪ್ರಸಿದ್ಧ ಮಹದೇವಪುರ ಗ್ರಾಮದ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ದೇಗುಲದಲ್ಲಿ ಪ್ರಧಾನ ಅರ್ಚಕ ವೆಂಕಟೇಶ್ ಮೂರ್ತಿ ಅವರ ನೇತೃತ್ವದಲ್ಲಿ ಹೋಮ-ಹವನ ಪೂಜೆಗಳ ಅರ್ಪಣೆಗಳನ್ನು ನಡೆಯಿತು. ಬುಧವಾರ ರಾತ್ರಿ ಗಿರಿಜಾ ಕಲ್ಯಾಣೋತ್ಸವ ನೆರವೇರಿಸಲಾಗಿತ್ತು. ಗುರುವಾರ ಮಂಟಪ ಸೇವೆ, ಯಾತ್ರದಾನ ಬಳಿಕ ರಥಪ್ರತಿಷ್ಠೆ ಅರ್ಪಿಸಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ರಾಜಶ್ವ ನೀರಿಕ್ಷಕ ರೇವಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು. ಸಹಸ್ರಾರು ಸಂಖ್ಯೆಯ ಭಕ್ತರು ಶಿವನಾಮ ಸ್ಮರಣೆಯೊಂದಿಗೆ ಭಕ್ತಿಭಾವದಿಂದ ತೇರನ್ನು ಎಳೆದರು. ಹರಕೆ ಹೊತ್ತವರು ಹಾಗೂ ನವ ವಧು-ವರರು ತೇರಿಗೆ ಹಣ್ಣು-ದವನ ಎಸೆದು ಒಳಿತಿಗಾಗಿ ಪ್ರಾರ್ಥಿಸಿದರು.
ಈ ವೇಳೆ ಅಲ್ಲಲ್ಲಿ ಪಾನಕ-ಮಜ್ಜಿಗೆ ವಿತರಿಸಲಾಗುತ್ತಿತ್ತು. ಬಳಿಕ ದೇವಾಲಯದ ಆವರಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಮಹದೇವಪುರ ಬೋರೆ, ಚನ್ನಹಳ್ಳಿ, ತರಿಪುರ, ಶಾಂತಿಕೊಪ್ಪಲು, ಮಂಡ್ಯದಕೊಪ್ಪಲು, ವಡಿಯಾಂಡಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಹಾಗೂ ಶ್ರೀರಂಗಪಟ್ಟಣ, ಮಂಡ್ಯ ಮತ್ತು ಮೈಸೂರು ನಿಂದಲೂ ಭಕ್ತರು ಆಗಮಿಸಿದ್ದರು.
ಗ್ರಾಮದ ಯಜಮಾನರು, ಮುಖ್ಯಸ್ಥರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮುಖಂಡರು ಈ ವೇಳೆ ಇದ್ದರು. ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net