ಓದುಗರ ಅಭಿರುಚಿಗೆ ತಕ್ಕ ಪುಸ್ತಕವಿರಲಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯದಲ್ಲಿ ಆಯೋಜಿಸಿದ್ದ ಗ್ರಂಥಾಲಯಗಳ ನಿವೇಶನ ಹಾಗೂ ಪುಸ್ತಕಗಳ ಖರೀದಿ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಗ್ರಂಥಾಲಯಗಳ ನಿವೇಶನ ಹಾಗೂ ಪುಸ್ತಕಗಳ ಖರೀದಿ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಂಥಾಲಯಗಳ ನಿವೇಶನ ಹಾಗೂ ಪುಸ್ತಕಗಳ ಖರೀದಿ ಕುರಿತ ಸಭೆ
ಮಂಡ್ಯ: ಗ್ರಂಥಾಲಯಗಳಿಗೆ ಆಗಮಿಸುವ ಓದುಗರ ಅಭಿರುಚಿ ಹಾಗೂ ಅಗತ್ಯಕ್ಕೆ ಅನುಗುಣವಾಗಿ ವಿವಿಧ ವಿಷಯಗಳ ಗುಣಮಟ್ಟದ ಪುಸ್ತಕಗಳನ್ನು ಆಯ್ಕೆ ಮಾಡಿ ಖರೀದಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಂಥಾಲಯಗಳ ನಿವೇಶನ ಹಾಗೂ ಪುಸ್ತಕಗಳ ಖರೀದಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು ಸೇರಿದಂತೆ ವಿವಿಧ ವಯೋಮಾನದ ಓದುಗರಿಗೆ ಅಗತ್ಯವಿರುವ ಪುಸ್ತಕಗಳು ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಕ್ರಮ ವಹಿಸಬೇಕು ಎಂದರು.
ಓದುಗರ ಬೇಡಿಕೆ ಹಾಗೂ ಅಭಿರುಚಿಯನ್ನು ಪರಿಗಣಿಸಿ ಪ್ರಸ್ತುತ ಅಗತ್ಯಗಳಿಗೆ ಪೂರಕವಾಗಿರುವ ಗುಣಮಟ್ಟದ ಪುಸ್ತಕಗಳನ್ನು ಆಯ್ಕೆ ಮಾಡಬೇಕು. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪುಸ್ತಕಗಳಿಗೆ ಆದ್ಯತೆ ನೀಡಬೇಕು. ಅಭ್ಯರ್ಥಿಗಳಿಗೆ ಅಗತ್ಯವಿರುವ ಅಧ್ಯಯನ ಸಾಮಗ್ರಿಗಳು ಒಂದೇ ಕಡೆ ಸುಲಭವಾಗಿ ದೊರೆಯುವಂತೆ ಗ್ರಂಥಾಲಯಗಳನ್ನು ಸಜ್ಜುಗೊಳಿಸಬೇಕು ಎಂದು ತಿಳಿಸಿದರು.
ಶಿಥಿಲಾವಸ್ಥೆಯಲ್ಲಿರುವ ಗ್ರಂಥಾಲಯ ಸ್ಥಳಾಂತರಕ್ಕೆ ಸೂಚನೆ: ಮದ್ದೂರು ತಾಲೂಕಿನ ಶಿವಪುರ ಶಾಖಾ ಗ್ರಂಥಾಲಯವು ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆಯಲ್ಲಿ ಓದುಗರಿಗೆ ಸುರಕ್ಷಿತ ಹಾಗೂ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಗ್ರಂಥಾಲಯವನ್ನು ಮದ್ದೂರು ಸತ್ಯಾಗ್ರಹ ಸೌಧಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಂಥಾಲಯಗಳ ಆನ್‌ಲೈನ್ ನೋಂದಣಿ ಪ್ರಕ್ರಿಯೆಗಾಗಿ ಓದುಗರು ಹೊರಗಡೆ ತೆರಳಿ ಹೆಚ್ಚುವರಿ ಹಣ ಖರ್ಚು ಮಾಡುವ ಪರಿಸ್ಥಿತಿ ಉಂಟಾಗದಂತೆ ಕ್ರಮ ವಹಿಸಬೇಕು. ಪ್ರತಿಯೊಂದು ಗ್ರಂಥಾಲಯದಲ್ಲಿಯೂ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿ, ಓದುಗರಿಗೆ ಅಲ್ಲಿಯೇ ಆನ್‌ಲೈನ್ ನೋಂದಣಿ ಮಾಡಿಕೊಳ್ಳಲು ಅಗತ್ಯ ಸಹಕಾರ ನೀಡಬೇಕು ಎಂದರು.
ಗ್ರಂಥಾಲಯ ಸೇವೆಗಳನ್ನು ಪಡೆಯುವಲ್ಲಿ ಓದುಗರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಅಗತ್ಯ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಕಲ್ಪಿಸಬೇಕು. ಗ್ರಂಥಾಲಯಗಳು ಕೇವಲ ಪುಸ್ತಕಗಳ ಸಂಗ್ರಹದ ಸ್ಥಳವಾಗಿರದೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಜ್ಞಾನಾರ್ಜನೆಗೆ ಅನುಕೂಲವಾಗುವ ಕಲಿಕಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಮುಖ್ಯ ಗ್ರಂಥಾಲಯ ಅಧಿಕಾರಿ ಡಿ.ನಾಗವೇಣಿ, ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net