ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಲಿ: ಯುವ ನಾಯಕ ಸಚ್ಚಿದಾನಂದ ನೇತೃತ್ವದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣಗೆ ಮನವಿ

  ಬೆಂಗಳೂರಿನಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರನ್ನು ಅಭಿನಂದಿಸಲಾಯಿತು.
ಬೆಂಗಳೂರಿನಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರನ್ನು ಅಭಿನಂದಿಸಲಾಯಿತು.
Published on
ಮಂಡ್ಯ: ಜನರಿಗೆ ಅನುಕೂಲವಾಗುವಂತೆ ರೈಲ್ವೆ ಸೌಕರ್ಯದ ಬೇಡಿಕೆ ಬಗ್ಗೆ ಚರ್ಚಿಸಲು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನಲ್ಲಿ ಅವರ ನಿವಾಸದಲ್ಲಿ ಭೇಟಿ ಮಾಡಿ ಹಲವು ಬೇಡಿಕೆ ಈಡೇರಿಸಲು ಮನವಿ ಮಾಡಲಾಯಿತು. ಬಹುಮುಖ್ಯವಾಗಿ ಕೊತ್ತತ್ತಿ ಹೋಬಳಿ ನೊದೆಕೊಪ್ಪಲು ಗ್ರಾಮದ ಸಮೀಪವಿರುವ ಅಂಡರ್‌ಪಾಸ್ ಕಿರಿದಾಗಿದೆ. ಲಾರಿ ಸೇರಿದಂತೆ ಎತ್ತರದ ವಾಹನಗಳ ಓಡಾಟ ಕಷ್ಟವಾಗಿದೆ. ಮಳೆ ಬಂದರೆ ನೀರು ನಿಲ್ಲುತ್ತದೆ. ಜತೆಗೆ ವಿದ್ಯುತ್ ದೀಪವೂ ಇಲ್ಲ. ಪರಿಣಾಮ ಮಕ್ಕಳು, ಮಹಿಳೆಯರ ಓಡಾಟಕ್ಕೂ ಕಷ್ಟವಾಗಿದೆ. ಈ ಸಮಸ್ಯೆ ಬಗಹರಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಇದಲ್ಲದೆ, ಶ್ರೀರಂಗಪಟ್ಟಣದಲ್ಲಿನ ರೈಲ್ವೆ ನಿಲ್ದಾಣವನ್ನು ತುರ್ತಾಗಿ ಮೇಲ್ದರ್ಜೆಗೇರಿಸಬೇಕಿದೆ. ಜತೆಗೆ ಪ್ಲಾಟ್ ಫಾರ್ಮ್ ವಿಸ್ತರಣೆ ಮಾಡಬೇಕು. ಕೆಲ ರೈಲುಗಳ ನಿಲುಗಡೆಗೆ ಕ್ರಮವಹಿಸಬೇಕು. ಇದರಿಂದ ಪ್ರತಿನಿತ್ಯ ಸಾವಿರಾರೂ ಜನ ಪ್ರಯಾಣಿಕರಿಗೆ ಉಪಯೋಗವಾಗಲಿದೆ. ಇನ್ನು ಇಂಡುವಾಳು ಗ್ರಾಮದಲ್ಲಿ ಕೆಳ ಸೇತುವೆ ಮಾಡಿಕೊಡಬೇಕು. ಯಲಿಯೂರು ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ರೈಲ್ವೆ ಜಾಗವನ್ನು ಬಿಟ್ಟುಕೊಡಬೇಕು. ಜತೆಗೆ ರೈಲ್ವೆ ಗೂಡ್ಸ್ ಸ್ಟೇಷನ್ ಯಲಿಯೂರು ಗ್ರಾಮದಲ್ಲಿಯೇ ಸ್ದಾಪಿಸಬೇಕೆಂದು ಸಚ್ಚಿದಾನಂದ ಕೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವ ವಿ.ಸೋಮಣ್ಣ, ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಕರೆ ಮಾಡಿ ಸೂಚನೆ ನೀಡಿದ್ದಾರೆ.
ಗ್ರಾಪಂ ಮಾಜಿ ಅಧ್ಯಕ್ಷ ಕಬ್ಬನಹಳ್ಳಿ ರಾಮಚಂದ್ರು, ತಡಗವಾಡಿ ಬಾಬು, ಎಲ್.ಶಿವನಂಜು, ಕೆ.ಆತ್ಮಾನಂದ, ಯಲಿಯೂರು ಆತ್ಮ, ಬಿ.ಯರಹಳ್ಳಿ ಪ್ರಮೋದ್, ಗಂಜಾಂ ಶಿವು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net