ಶ್ರೀರಂಗಪಟ್ಟಣ ತಾಲೂಕಿನ ಮಿಣಜಿಬೋರನಕೊಪ್ಪಲು ಗ್ರಾಮದಲ್ಲಿ ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ಸಮ್ಮುಖದಲ್ಲಿ ಹಲವರು ಬಿಜೆಪಿ ಸೇರ್ಪಡೆಯಾದರು. ಸತೀಶ್ ಆರ್ಯನ್, ಎಸ್.ಎಲ್.ಲಿಂಗರಾಜು, ದರ್ಶನ್ ಲಿಂಗರಾಜು, ಯತಿರಾಜು ಇದ್ದರು.
Published on:
Copied
Follow Us
ಶ್ರೀರಂಗಪಟ್ಟಣ: ಡಾ.ಅಂಬೇಡ್ಕರ್ ಅವರು ಕಂಡ ಸಂವಿಧಾನದ ಆಶಯಗಳನ್ನು ಉಳಿಸಿ, ಈಡೇರಿಸುವಲ್ಲಿ ಬಿಜೆಪಿ ದೇಶದ ಜನರ ನಂಬಿಕೆ ಗಳಿಸಿದ್ದು, ಬಹತೇಕ ಎಲ್ಲ ರಾಜ್ಯಗಳ ಜನರು ಪ್ರಧಾನಿ ನರೇಂದ್ರ ಮೋದಿ ಬೆನ್ನಿಗೆ ನಿಂತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ತಿಳಿಸಿದರು.
ತಾಲೂಕಿನ ಮಿಣಜಿಬೋರನಕೊಪ್ಪಲು ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರೀಶಂಭುಲಿಂಗೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಯುವ ಬಳಗದ ಹಲವರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ ಹಾಗೂ ಮಾದರಿಯಾಗಲು ಅಂಬೇಡ್ಕರ್ ಅವರ ನೇತೃತ್ವ ಮತ್ತು ನಿಲುವುಗಳು ಕಾರಣ. ಸಂವಿಧಾನಿಕ ಹಕ್ಕುಗಳು ಮತ್ತು ಬದ್ಧತೆಗಳನ್ನು ಈಡೇರಿಸುವಲ್ಲಿ ಬಿಜೆಪಿ ಸಾಕಷ್ಟು ಕ್ರಮವಹಿಸಿದ್ದು, ಭಾರತೀಯರಿಗೆ ನಿಧಾನವಾಗಿ ಮನದಟ್ಟಾಗತೊಡಗಿದೆ. ಹೀಗಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಪರ ಒಲವು ಹೆಚ್ಚಾಗುತ್ತಿದ್ದು, ಕಾರ್ಯಕರ್ತರ ಸಂಖ್ಯೆಯೂ ಬಲವಾಗುತ್ತಿದೆ. ಸುಭದ್ರ ಆಡಳಿತ ಹಾಗೂ ಜನಪರ ಯೋಜನೆಗಳೇ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವ ನಾಯಕತ್ವದ ಸಂಕೇತ ಎಂದರು.
ಇದಕ್ಕೂ ಮೊದಲು ದೇವಾಲಯದ ಜೀರ್ಣೋದ್ಧಾರಕ್ಕಾಗಿ 1 ಲಕ್ಷ ರೂ. ದೇಣಿಗೆ, ಇತರ ಸಮಾಜಮುಖಿ ಅಭಿವೃದ್ಧಿಗಳ ನೀಡುವ ಭರವಸೆಯನ್ನು ಸಚ್ಚಿದಾನಂದ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು, ಸಾಧಕರನ್ನು ಸನ್ಮಾನಿಸಲಾಯಿತು. ಬಳಿಕ ಗ್ರಾಮದ ಯುವ ಮುಖಂಡ ಸತೀಶ್ ಆರ್ಯನ್ ನೇತೃತ್ವದಲ್ಲಿ ಯುವಕರು ಸಚ್ಚಿದಾನಂದ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಜಿಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು, ಯುವ ಮುಖಂಡ ದರ್ಶನ್ ಲಿಂಗರಾಜು, ಪಿಕಾರ್ಡ್ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಸಿ.ಕೃಷ್ಣೇಗೌಡ, ಯುವ ಮುಖಂಡ ಯತಿರಾಜು, ಗವಿರಾಜು, ಸೋಮಶೇಖರ್, ದಿನೇಶ್, ಜರ್ನಾದನ್, ರವಿ ಇದ್ದರು.