ಅರ್ಹರನ್ನು ಗುರುತಿಸಿ ನಿವೇಶನ ಹಂಚಿಕೆ: ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ

ಮಂಡ್ಯ ತಾಲೂಕಿನ ರಾಯಶೆಟ್ಟಿಪುರ ಹಾಗೂ ಮೋಳೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.
ಮಂಡ್ಯ ತಾಲೂಕಿನ ರಾಯಶೆಟ್ಟಿಪುರ ಹಾಗೂ ಮೋಳೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಯಶೆಟ್ಟಿಪುರ ಹಾಗೂ ಮೋಳೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ
  • 40 ಲಕ್ಷ ರೂಪಾಯಿ ವೆಚ್ಚದ ಕೆಲಸಕ್ಕೆ ಚಾಲನೆ
ಮಂಡ್ಯ: ಅರ್ಹ ಬಡವರನ್ನು ಗುರುತಿಸಿ ಅವರಿಗೆ ನಿವೇಶನ ಒದಗಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಭರವಸೆ ನೀಡಿದರು.
ತಾಲೂಕಿನ ರಾಯಶೆಟ್ಟಿಪುರ ಹಾಗೂ ಮೋಳೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ನಿವೇಶನ ರಹಿತರನ್ನು ಗುರುತಿಸುವ ಪ್ರಕ್ರಿಯೆ ನಡೆಯಲಿದೆ. ಅಂತೆಯೇ ಸರ್ಕಾರಿ ಜಾಗ ಗುರುತಿಸಿ ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು. ರಾಯಶೆಟ್ಟಿಪುರ ಹಾಗೂ ಮೋಳೆ ಗ್ರಾಮದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ 40 ಲಕ್ಷ ರೂಪಾಯಿ ನೀಡಲಾಗಿದೆ. ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ಮಾಣ ಮಾಡುವಲ್ಲಿ ಗುತ್ತಿಗೆದಾರರು ಕ್ರಮ ವಹಿಸಬೇಕು. ಹಾಗೆಯೇ ಉಳಿದ ರಸ್ತೆಗಳನ್ನು ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಮಾತನಾಡಿ, ಮೋಳೆ ಗ್ರಾಮದಲ್ಲಿ ಕಳೆದ ಐವತ್ತು ವರ್ಷದಲ್ಲಿ ಆಗದ ಅಭಿವೃದ್ಧಿ ಕೆಲಸವನ್ನು ಶಾಸಕ ಪಿ.ರವಿಕುಮಾರ್ ಗಣಿಗ ಮಾಡುತ್ತಿದ್ದಾರೆ. ಶೇ.80ರಷ್ಟು ಗ್ರಾಮಸ್ಥರು ಸಂಚಾರ ಮಾಡುವ ಮಾರ್ಗವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುತ್ತಿದೆ. ಮೋಳೆ ಗ್ರಾಮಕ್ಕೆ ನಾಲ್ಕನೇ ಬಾರಿ ಶಾಸಕರು ಬಂದಿದ್ದಾರೆ. ಹಿಂದೆ ಬಂದಂತಹ ಸಂದರ್ಭದಲ್ಲಿ ಗ್ರಾಮಸ್ಥರ ಮನವಿ ಮೇರೆಗೆ ಕಾಂಕ್ರೀಟ್ ರಸ್ತೆಯನ್ನು ಮಾಡಿಕೊಟ್ಟಿದ್ದರು. ಪಿಕಪ್ ನಾಲೆ ಅಭಿವೃದ್ಧಿಗೂ ಅನುದಾನ ಬಂದಿದೆ. ನಾಲೆಗಳ ಪುನಶ್ಚೇತನಕ್ಕೆ ರಾಜ್ಯಸರ್ಕಾರ 100 ಕೋಟಿ ರೂ ಅನುದಾನ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಶೀಘ್ರವೇ ಟೆಂಡರ್ ಆಗಿ ಕೆಲಸ ಪ್ರಾರಂಭವಾಗಲಿದೆ. ಆ ಕಾಮಗಾರಿ ಮುಗಿದರೆ ನಾಲೆಯಲ್ಲಿ ನೀರು ಸರಾಗವಾಗಿ ಹರಿಯಲಿದ್ದು, ರೈತರಿಗೆ ಅನುಕೂಲವಾಗಲಿದೆ ಎಂದರು.
ಮುಖಂಡರಾದ ದ್ಯಾಪಸಂದ್ರ ಉಮೇಶ್, ನಾಗರಾಜು, ಪ್ರಕಾಶ್, ರಾಮಕೃಷ್ಣ ಇತರರಿದ್ದರು. ಇದಕ್ಕೂ ಮುನ್ನ ಶಾಸಕರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಇದೇ ಪ್ರವಾಸದ ವೇಳೆ ಹನಗನಹಳ್ಳಿ ಗೇಟ್ ಬಳಿ ಶಾಸಕ ಪಿ.ರವಿಕುಮಾರ್ ಗಣಿಗ ಸಾರ್ವಜನಿಕರ ಅಹವಾಲು ಆಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net