ನೂರು ಕೋಟಿ ರೂ ವೆಚ್ಚದಲ್ಲಿ ನಾಲಾಭಿವೃದ್ಧಿ: ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ

ಮಂಡ್ಯ ತಾಲೂಕು ಜೀಗುಂಡಿಪಟ್ಟಣದಲ್ಲಿ ನಾಲೆ ಆಧುನೀಕರಣ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.
ಮಂಡ್ಯ ತಾಲೂಕು ಜೀಗುಂಡಿಪಟ್ಟಣದಲ್ಲಿ ನಾಲೆ ಆಧುನೀಕರಣ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.
Published on
ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಾಲೆಗಳು ಆಧುನೀಕರಣ ಕೆಲಸ ನಡೆಯುತ್ತಿದೆ. ಈಗ ರಾಜ್ಯಸರ್ಕಾರ ಮತ್ತೆ ನೂರು ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಅದರಿಂದ ಕ್ಷೇತ್ರ ಎಲ್ಲ ನಾಲೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಜೀಗುಂಡಿಪಟ್ಟಣದಲ್ಲಿ ಐದು ಕೋಟಿ ರೂ ವೆಚ್ಚದ ನಾಲೆ ಆಧುನೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹೊಸೂರು ಕಾಲನಿ ಮತ್ತು ಜೀಗುಂಡಿಪಟ್ಟಣ, ಎಸ್.ಐ.ಕೋಡಿಹಳ್ಳಿ, ಹುಲಿವಾನ ಗ್ರಾಮದ ಮೂಲಕ ಹಾದುಹೋಗುವ ನಾಲೆಯನ್ನು ಐದು ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ನಾಲೆ ಜತೆಗೆ ಸರ್ವೀಸ್ ರಸ್ತೆ, ಸೇತುವೆ ಕಾಮಗಾರಿಯೂ ನಡೆಯಲಿದೆ ಎಂದರು.
ಹಿಂದೆಲ್ಲ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಬಿಟ್ಟರೆ ಮಂಡ್ಯ ವಿಧಾನಸಭಾ ಕ್ಷೇತ್ರದ ರೈತರ ಜಮೀನಿಗೆ ತಲುಪಲು ನಾಲ್ಕೈದು ದಿನ ಆಗುತ್ತಿತ್ತು. ಜತೆಗೆ ಜಮೀನಿಗೆ ನೀರು ಹಾಯಿಸಲು ರಾತ್ರಿಯಿಡೀ ಕಾಯುವಂತಹ ಪರಿಸ್ಥಿತಿ ಇತ್ತು. ಇದನ್ನು ತಪ್ಪಿಸಲು ಹಾಗೂ ಡ್ಯಾಂನಿಂದ ನೀರು ಬಿಟ್ಟರೆ ಕೇವಲ ಎಂಟು ಗಂಟೆ ಅವಧಿಯೊಳಗೆ ಜಮೀನಿಗೆ ಬರುವಂತೆ ಮಾಡುವ ಉದ್ದೇಶದೊಂದಿಗೆ ನಾಲೆ ಅಭಿವೃದ್ಧಿ ಮಾಡಲಾಗುತ್ತಿದೆ. ಒಟ್ಟಾರೆ ರೈತರಿಗೆ ತೊಂದರೆಯಾಗಬಾರದೆನ್ನುವುದು ನಮ್ಮ ಸರ್ಕಾರದ ಉದ್ದೇಶ ಎಂದರು.
ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್, ಮುಖಂಡರಾದ ಪ್ರಕಾಶ್, ಮಹದೇವು, ಅಭಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net