ಸವಲತ್ತು ಬಳಸಿಕೊಂಡು ಸದೃಢರಾಗಿ

ನಾಗಮಂಗಲ ತಾಲೂಕಿನ ತಿರುಗನಹಳ್ಳಿ ಗ್ರಾಮದಲ್ಲಿ ಅರ್ಹ ಫಲಾನುಭವಿ ರೈತರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಿದರು. ಡಾ.ಭಾನುಪ್ರಕಾಶ್,  ಆರ್.ಹರೀಶ್, ವಿ.ಕೃಷ್ಣಮೂರ್ತಿ ಇತರರು ಇದ್ದರು.
ನಾಗಮಂಗಲ ತಾಲೂಕಿನ ತಿರುಗನಹಳ್ಳಿ ಗ್ರಾಮದಲ್ಲಿ ಅರ್ಹ ಫಲಾನುಭವಿ ರೈತರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಿದರು. ಡಾ.ಭಾನುಪ್ರಕಾಶ್, ಆರ್.ಹರೀಶ್, ವಿ.ಕೃಷ್ಣಮೂರ್ತಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ
ನಾಗಮಂಗಲ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ನಾಡಿನ ರೈತರಿಗೆ ಗರಿಷ್ಠ ಪ್ರಮಾಣದ ಸವಲತ್ತು ನೀಡಲಾಗುತ್ತಿದೆ. ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬೇಕೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.
ತಾಲೂಕಿನ ತಿರುಗನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ಗ್ರಾಮದ 65 ಮಂದಿ ಅರ್ಹ ಫಲಾನುಭವಿ ರೈತರಿಗೆ ರಿಯಾಯಿತಿ ದರದಲ್ಲಿ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಿ ಮಾತನಾಡಿದರು. ರಾಜ್ಯ ಸರ್ಕಾರ ಕೇವಲ 5 ಗ್ಯಾರಂಟಿ ಯೋಜನೆಗಳಿಗಷ್ಟೇ ಸೀಮಿತವಾಗಿಲ್ಲ. ನಾಡಿನ ರೈತರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನಸಾಮಾನ್ಯರ ಶ್ರೇಯೋಭೀವೃದ್ಧಿಗೆ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಕೃಷಿ ಇಲಾಖೆಯಲ್ಲಿ ಪ್ರತಿ ವರ್ಷ ರೈತರಿಗೆ ಅನೇಕ ಸವಲತ್ತು ಒದಗಿಸಲಾಗುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ರೈತರ ಹಿತಕಾಯುವ ಉದ್ದೇಶದಿಂದ ಯೋಜನೆಗಳನ್ನು ಹೆಚ್ಚಿಸಿ ಗರಿಷ್ಠ ಪ್ರಮಾಣದಲ್ಲಿ ಸವಲತ್ತು ನೀಡಲಾಗುತ್ತಿದೆ. ಮೂರು ವರ್ಷದಿಂದ ತಾಲೂಕಿನ ಅರ್ಹ ಫಲಾನುಭವಿ ರೈತರಿಗೆ 3.10 ಕೋಟಿ ರೂ. ವೆಚ್ಚದ 668 ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
2018ರಿಂದ 5 ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಇಲಾಖೆಯ ಕೃಷಿ ಹೊಂಡ ಯೋಜನೆಯನ್ನೇ ಸ್ಥಗಿತಗೊಳಿಸಿದ್ದರು. ನಾನು ಕೃಷಿ ಸಚಿವನಾದ ನಂತರ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ಕೃಷಿ ಹೊಂಡ ಯೋಜನೆಗೆ ಚಾಲನೆ ಕೊಟ್ಟು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಯಿತು. ಮೂರು ವರ್ಷದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿರುವ ತಾಲೂಕಿನ 300 ಮಂದಿ ರೈತರಿಗೆ ಸಬ್ಸಿಡಿ ಹಣ ನೀಡಲಾಗಿದೆ ಎಂದು ತಿಳಿಸಿದರು.
ಬೆಳೆ ವಿಮೆ ಮಾಡಿಸಿರುವ ರಾಜ್ಯದ 28 ಲಕ್ಷ ರೈತರ ಬ್ಯಾಂಕ್ ಉಳಿತಾಯ ಖಾತೆಗೆ 6 ಸಾವಿರ ಕೋಟಿ ರೂ. ಹಣ ಪಾವತಿಯಾಗಿದೆ. ಹಾಗಾಗಿ ರೈತರು ಇಲಾಖೆಯಲ್ಲಿ ದೊರಕುವ ರಿಯಾಯಿತಿ ದರದ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ಶೇ.90ರ ಸಬ್ಸಿಡಿಯಲ್ಲಿ ತುಂತುರು ನೀರಾವರಿ, ಟಾರ್ಪಲ್ ಸೇರಿದಂತೆ ವಿವಿಧ ಕೃಷಿ ಪರಿಕರಗಳನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಎರಡೂವರೆ ವರ್ಷದಲ್ಲಿ ಐದು ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಸುಮಾರು 54 ಸಾವಿರ ರೂ. ಹಣ ತಲುಪಿದೆ. 5 ವರ್ಷದಲ್ಲಿ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ಗ್ಯಾರಂಟಿ ಯೋಜನೆಯಿಂದ ಫಲಾನುಭವಿಗಳಿಗೆ ತಲುಪುತ್ತದೆ. ಕರ್ನಾಟಕ ಹೊರತುಪಡಿಸಿ ದೇಶದ ಯಾವುದೇ ರಾಜ್ಯದಲ್ಲಿಯೂ ಅಲ್ಲಿನ ಸರ್ಕಾರಗಳು ಇಷ್ಟು ದೊಡ್ಡ ಪ್ರಮಾಣದ ಸಹಕಾರವನ್ನು ಜನರಿಗೆ ಕೊಟ್ಟಿಲ್ಲ. ನಮ್ಮ ರಾಜ್ಯದಲ್ಲಿಯೂ ಕೂಡ ಸ್ವಾತಂತ್ರ್ಯ ನಂತರ ಯಾವುದೇ ಸರ್ಕಾರ ಕೊಟ್ಟಿರಲಿಲ್ಲ. ಜನರು ಇದನ್ನು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.
ಪಾಂಡವಪುರ ಉಪವಿಭಾಗದ ಉಪ ಕೃಷಿ ನಿರ್ದೇಶಕ ಡಾ.ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ತಾಪಂ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ, ಮನ್‌ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ, ಮುಖಂಡರಾದ ಆರ್.ಕೃಷ್ಣೇಗೌಡ, ನಾಗಣ್ಣ, ಪರಮೇಶ್, ದೇವರಾಜು, ಹಂದೇನಹಳ್ಳಿ ಮಹದೇವ, ರಘು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net