ಸತ್ಯ ಜ್ಞಾನದ ಪಥ ತೋರಿಸಿದ ಬಸವಣ್ಣ: ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿಕೆ

ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಶರಣರ ಸಂಘಟನಾ ವೇದಿಕೆ ವತಿಯಿಂದ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಶರಣರ ಸಂಘಟನಾ ವೇದಿಕೆ ವತಿಯಿಂದ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಗಾಂಧಿಭವನದಲ್ಲಿ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ
  • ಶರಣರ ಸಂಘಟನಾ ವೇದಿಕೆ ವತಿಯಿಂದ ಆಯೋಜನೆ
ಮಂಡ್ಯ: ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಸರಳ ಸೂತ್ರವನ್ನು ಕೊಟ್ಟು ಉತ್ತಮ ಸಮಾಜ ನಿರ್ಮಾಣದ ಅಡಿಗಲ್ಲು ಹಾಕಿಕೊಟ್ಟಿದ್ದಾರೆ. ಇದಕ್ಕಿಂತಲೂ ಸರಳವಾದ ಸೂತ್ರ ಶಾಂತಿಯುತ ಸಮಾಜಕ್ಕೆ ಮತ್ತೊಂದಿಲ್ಲ ಎಂದು ನಿವೃತ್ತ ಐಎಎಸ್ ಅಧಿಕಾರಿ, ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.
ನಗರದ ಗಾಂಧಿಭವನದಲ್ಲಿ ಶರಣರ ಸಂಘಟನಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳಿಗೆ ಬಸವಣ್ಣ ಅವರ ವಚನದ ಈ ಸಾಲುಗಳ ವಿಶಾಲಾರ್ಥವನ್ನು ತಿಳಿಸಿಕೊಟ್ಟರೆ ಸಾಕು ಅವರು ವಿಶ್ವಮಾನವರಾಗಿ ಬೆಳಗುತ್ತಾರೆ. ಬಸವಣ್ಣನವರ ವಚನಗಳು ಒಂದು ಜೀವನ ವಿಧಾನವನ್ನು ರೂಪಿಸಿದೆ. ಮೌಢ್ಯದ ಕತ್ತಲೆಯ ಕಾಲಘಟ್ಟದಲ್ಲಿ ನರಳುತ್ತಿದ್ದ ಸಮಾಜಕ್ಕೆ ಸತ್ಯ, ಜ್ಞಾನದ ಪಥವನ್ನು ತೋರಿಸಿದ ಬಸವಣ್ಣ ಅವರು, ವಿಶ್ವದ ವಿಸ್ಮಯ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಮಾತನಾಡಿ, ಬಸವಣ್ಣ ಎಂದರೆ ಸಮಾನತೆ, ಸ್ವಾತಂತ್ರ್ಯ, ಕನ್ನಡ ಸಾಹಿತ್ಯ ಎಂಬುದನ್ನು ಅರ್ಥೈಸಿಕೊಂಡವರಿಗೆ ಮಾತ್ರ ಬಸವ ಜಯಂತಿಯ ಮಹತ್ವ ಅರ್ಥವಾಗುತ್ತದೆ. ಜನರನ್ನು ಮೌಢ್ಯದಿಂದ ಅಸಮಾನತೆಯಿಂದ ಹೊರತಂದ ಮಹಾನ್ ಮಾನವತಾವಾದಿ, ವಿಶ್ವಗುರು ಬಸವಣ್ಣ ಅವರು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ ಎಂದರು.
ಇಂದಿನ ಯುವ ಜನತೆ ಧರ್ಮ ಎಂದರೆ ಮೌಢ್ಯಾಚರಣೆ ಎಂದು ತಿಳಿದಿರುವುದು ವಿಷಾದನೀಯ. ದೇವಾಲಯಗಳಿಗೆ ಹೋಗಿ ಈಡುಗಾಯಿ, ನಿಂಬೆಹಣ್ಣು ಮಂತ್ರಿಸುವ ಮೌಢ್ಯತೆಯನ್ನು ಬಿಟ್ಟು, ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಪರೋಪಕಾರದಲ್ಲಿ ದೇವರನ್ನು ಕಾಣಬೇಕು. ಶರಣರು ಹೇಳಿದ ಕಾಯಕ ಮತ್ತು ದಾಸೋಹ ತತ್ವವನ್ನು ಅನುಸರಿಸಿದಾಗ ಸಮಾಜ ಸುಧಾರಣೆಯಾಗುತ್ತದೆ ಎಂದು ತಿಳಿಸಿದರು.
ಶರಣರ ಸಂಘಟನಾ ವೇದಿಕೆ ಅಧ್ಯಕ್ಷ ನಂದೀಶ್ ಕಾಡುಕೊತ್ತನಹಳ್ಳಿ, ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್, ಲಿಂಗಾಯತ ಸಂಘಟನೆಗಳ ಮುಖಂಡ ಆನಂದ್, ವಕೀಲ ಎಂ.ಬಿ.ರಾಜಶೇಖರ್, ನಾಗರಾಜು, ಬಬ್ರುವಾಹನ, ಎಂ.ಎಸ್.ಶಿವಪ್ರಕಾಶ್, ಎಂ.ಎಸ್.ಮಂಜುನಾಥ್ ಮಂಡಿಬೆಟ್ಟಹಳ್ಳಿ, ಮೆಣಸಗೆರೆ ಶಿವಲಿಂಗಪ್ಪ, ಡಾ.ಹರ್ಷ ಬಸಪ್ಪ, ಕವಿತಾ, ಷಡಕ್ಷರಿ, ರಮೇಶ್, ಬುಳ್ಳಪ್ಪ ಆಲಕೆರೆ, ನಿಜಗುಣ, ಮದ್ದೂರು ಮಹೇಶ್, ಸುಚೇಂದ್ರ ಇತರರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net