ಕಿಕ್ಕೇರಿ: ತ್ಯಾಗ, ಬಲಿದಾನದ ಹಬ್ಬವಾಗಿ ಹಸೆನ್, ಹುಸೇನ್ ಸ್ಮರಣೆಗಾಗಿ ಮೊಹರಂ ಹಬ್ಬವನ್ನು ಬಾಬಯ್ಯನ ಹಬ್ಬವಾಗಿ ಮುಸ್ಲಿಮರು ಆಚರಿಸಿದರು.
ಸಮೀಪದ ಮಂದಗೆರೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮೊಹರಂ ಹಬ್ಬದಲ್ಲಿ ಪ್ರವಾದಿ ಮೊಹಮ್ಮದ್ ಮೊಮ್ಮಗ ಹಸೆನ್, ಹುಸೆನ್ ಅವರನ್ನು ದೇವ ಮಾನವರಾಗಿ ಸ್ಮರಣೆ ಮಾಡಿದರು.
ಇವರ ಪಂಜ(ಹಸ್ತ)ಗಳನ್ನು ಇಲ್ಲಿನ ಗುಡಿಯಲ್ಲಿಟ್ಟು ಪೂಜಿಸಿದರು. ಮಂದಗೆರೆಯ ಹೇಮಾವತಿ ನದಿಯಲ್ಲಿ ಪಂಚವನ್ನು ಪವಿತ್ರ ಸ್ನಾನದೊಂದಿಗೆ ಶುಚಿಗೊಳಿಸಿ ವಿವಿಧ ಪರಿಮಳ ಪುಷ್ಪಗಳಿಂದ ಶೃಂಗರಿಸಿದರು.
ವಾರಗಟ್ಟಲೆ ಹಬ್ಬ ನಡೆದು ನಿತ್ಯವೂ ಪಂಜವನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದರು. ಹಬ್ಬದ ಕೊನೆಯ ದಿನದಂದು ರಾತ್ರಿ ಗುಡಿಯ ಮುಂದೆ ಮರದ ದಿಮ್ಮಿಗಳನ್ನು ಹಾಕಿ ಅಗ್ನಿಸ್ಪರ್ಶ ಮಾಡಿ ಕೊಂಡ ನಿರ್ಮಿಸಿದರು. ಕೊಂಡದ ಸುತ್ತ ಪುಷ್ಪಾಲಂಕೃತ ದೇವರ ಪಂಜಗಳನ್ನು ಪ್ರದಕ್ಷಿಣೆ ಹಾಕಿಸಿದರು.