ಸಾಧಕರ ಆದರ್ಶ ಮೈಗೂಡಿಸಿಕೊಂಡು ಇತಿಹಾಸ ಸೃಷ್ಟಿಸಿರಿ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಕಿವಿಮಾತು

ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಗಾಂಧಿಭವನದಲ್ಲಿ ಪ್ರತಿಭಾ ಪುರಸ್ಕಾರ
  • ಜಿಲ್ಲಾ ಒಕ್ಕಲಿಗರ ಸಂಘದಿಂದ ಆಯೋಜನೆ
ಮಂಡ್ಯ: ಸಾಧನೆ ಮಾಡಿದವರ ಆದರ್ಶವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸುವಂತಾಗಬೇಕು. ಅಂತಃಶಕ್ತಿಯ ಮೂಲಕ ಮಾತೃಭೂಮಿಗೆ ಏನಾದರೂ ಕೊಡುಗೆ ನೀಡಬೇಕೆಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ಸಾಧಕರಿಗೆ ಅಭಿನಂದನೆ ಮತ್ತು ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ದೊರೆಯುತ್ತಿರುವುದು ಅಂಕ ಗಳಿಕೆಯ ಪ್ರತಿಭೆಗಾಗಿ ಮಾತ್ರ. ಇದರೊಂದಿಗೆ ನೀವು ಪುರಸ್ಕಾರ ಪಡೆಯಬೇಕಾದದ್ದು ಶಿಕ್ಷಣ ಜತೆಗೆ ಸಂಸ್ಕಾರಕ್ಕೆ. ಉನ್ನತ ಅಂಕ ಪಡೆದು ಎಷ್ಟೋ ಮಕ್ಕಳು ತಂದೆ-ತಾಯಿಯನ್ನೇ ಗೌರವಿಸದಿರುವ ನಡವಳಿಕೆಗಳನ್ನು ನಾವು ನೋಡಿದ್ದೇವೆ. ಇದು ಆ ಮಕ್ಕಳ ಕುಟುಂಬಕ್ಕಷ್ಟೇ ಅಲ್ಲ, ಸಮಾಜಕ್ಕೂ ಅಪಾಯಕಾರಿ ಎಂದು ಎಚ್ಚರಿಸಿದರು.
ಒಕ್ಕಲಿಗ ಸಂಘಟನೆಗಳು ಒಗ್ಗೂಡಬೇಕು. ಇದರಿಂದ ಸಮುದಾಯವನ್ನು ಹೊರತುಪಡಿಸಿಯೂ ಸಮಾಜಕ್ಕೆ ಸಹಕಾರಿಯಾಗಲಿದೆ. ಜಿಲ್ಲೆಯ ಅದಷ್ಟೋ ಪ್ರತಿಭಾವಂತ ಒಕ್ಕಲಿಗ ಸಮುದಾಯದ ಸಾಧಕರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದೇ ಜಿಲ್ಲೆಯ ಡಾ.ವಿವೇಕ್ ಹಲ್ಲೇಗೆರೆ ಅವರು ಅಮೆರಿಕಾದ ಶ್ವೇತಭವನ ಮುಖ್ಯ ಸಲಹಾಧಿಕಾರಿಯಾಗಿ ಕಾರ್ಯನಿರ್ವಹಿಸುವುದು ಇದಕ್ಕೆ ಉದಾಹರಣೆಯಾಗಿದೆ ಎಂದರು.
ಸಂವಿಧಾನ ತಜ್ಞ ಡಾ.ಸುಧಾಕರ ಹೊಸಳ್ಳಿ ಮಾತನಾಡಿ, ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ನಾಡುಕಟ್ಟಿದ ದೊರೆಯ ವಾರಸುದಾರರು. ನೀವು ಶಿಕ್ಷಣ ಪಡೆಯುವುದು ಕೇವಲ ನಿಮ್ಮ ಬದುಕನ್ನು ಗಟ್ಟಿಮಾಡಿಕೊಳ್ಳಲು ಅಲ್ಲ, ಬದಲಾಗಿ ನಾಡು ಕಟ್ಟುವ ಕಾಯಕದಲ್ಲಿ ನಿಮ್ಮ ಜ್ಞಾನ ಬಳಕೆಯಾಗಬೇಕು. ಮೆಕಾಲೆ ಶಿಕ್ಷಣದ ಕಾರಣದಿಂದ ಭಾರತದ ಯುವಜನರಲ್ಲಿ ದಾಸ್ಯದ ಮನಃಸ್ಥಿತಿ ಗಟ್ಟಿಗೊಳ್ಳುತ್ತಲೇ ಇದೆ. ಪಶ್ಚಿಮದ ರಾಷ್ಟ್ರಗಳಲ್ಲಿನ ಎಲ್ಲ ಆವಿಷ್ಕಾರದ ಮೂಲವೇ ಭಾರತವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಭಾರತೀಯ ನೆಲಮೂಲದ ಕೌಶಲಾಧಾರಿತ ಶಿಕ್ಷಣವನ್ನು ಮಾದರಿಯಾಗಿಟ್ಟುಕೊಂಡು ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ಥಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಜನ್ಮ ಬಹಳ ಶ್ರೇಷ್ಠ. ಈ ಜನ್ಮವನ್ನು ಶ್ರೇಷ್ಠವಾಗಿಸಿಕೊಳ್ಳಬೇಕು. ಮಕ್ಕಳು ಒಳ್ಳೆಯ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಗೌಡಯ್ಯನದೊಡ್ಡಿ ಅಧ್ಯಕ್ಷತೆ ವಹಿಸಿದ್ದರು. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ವಕೀಲ ವಿಶಾಲ್‌ರಘು, ಅಂತಾರಾಷ್ಟ್ರೀಯ ಅಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಹೊಸಪೇಟೆ-ತೋರಣಗಲ್ಲು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್.ಯೋಗಾನಂದ ಕೆರೆಗೋಡು, ಕೆಎಸ್‌ಒಯು ಡಾ.ವೆಂಕಟೇಗೌಡ, ಹಾಪ್‌ಕಾಮ್ಸ್ ಮಾಜಿ ನಿರ್ದೇಶಕ ಹೊಸಹಳ್ಳಿ ನಾಗೇಶ್ ಇತರರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಂಡ್ಯದ ಕನ್ನಿಕಾಶಿಲ್ಪಾ ನವೋದಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಚ್.ಆರ್.ಕನ್ನಿಕಾ, ಕೆ.ಆರ್.ಪೇಟೆಯ ಆಡಳಿತ ವೈದ್ಯಾಧಿಕಾರಿ ಡಾ.ಅಜಿತ್, ಮಳವಳ್ಳಿ ತಾಲೂಕು ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹನುಮಂತಯ್ಯ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net