ಉತ್ತಮ ಕೆಲಸಕ್ಕೆ ಮಂಡ್ಯದಲ್ಲಿ ಪ್ರೋತ್ಸಾಹ: ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಮೆಚ್ಚುಗೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಕೆ.ಜ್ಯೋತಿ ಅವರಿಗೆ ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಕೆ.ಜ್ಯೋತಿ ಅವರಿಗೆ ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
  • ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದಿಂದ ಆಯೋಜನೆ
ಮಂಡ್ಯ: ನಾನು ದೇಶದ ಹಲವು ರಾಜಕಾರಣಿಗಳನ್ನು ನೋಡಿದ್ದೇನೆ. ಈ ಪೈಕಿ ಇಷ್ಟವಾಗುವವರೆಂದರೆ ನಿತ್ಯ ಸಚಿವ ಕೆ.ವಿ.ಶಂಕರಗೌಡ, ಮಾಜಿ ಸಂಸದ ಡಾ.ಜಿ.ಮಾದೇಗೌಡ, ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ. ಈ ಮೂವರು ಆದರ್ಶರಾಗಿದ್ದರು. ಮಂಡ್ಯದ ಮೌಲ್ಯಗಳನ್ನು ಅವರಲ್ಲಿ ಕಾಣಬಹುದಾಗಿತ್ತು. ನಾನು ಇಲ್ಲಿ ಕೆಲಸ ಮಾಡುವಾಗ ಅವರು ಮತ್ತು ಜನರು ಕೊಟ್ಟ ಪ್ರೀತಿ ಮತ್ತು ಸಹಕಾರಕ್ಕಾಗಿ ಮಂಡ್ಯದ ಜನರಿಗೆ ಆಭಾರಿಯಾಗಿದ್ದೇನೆ ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ, ಲಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿಕ ಪ್ರಶಸ್ತಿ ಹಾಗೂ ಎಂ.ಆರ್. ಶಶಿಕಲಾ ಟಿ.ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನ 37 ವರ್ಷದ ಸೇವಾವಧಿಯಲ್ಲಿ ಮಂಡ್ಯದ ಕೆಲಸ ಆತ್ಮತೃಪ್ತಿ ತಂದು ಕೊಟ್ಟಿದೆ. ಇಲ್ಲಿನ ಜನರಿಂದ ಒಳ್ಳೆಯ ಕೆಲಸಗಳಿಗೆ ಸ್ಪಂದನೆ ಪ್ರೋತ್ಸಾಹ ಸಿಗುತ್ತದೆ ಎಂದರು.
ಟಿ.ತಿಮ್ಮೇಗೌಡ ಅವರು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದರ ಜತೆಗೆ ಮಂಗಲ ಗ್ರಾಮ ಅಭಿವೃದ್ಧಿಪಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮಂಗಲವನ್ನು ಆದರ್ಶ ಗ್ರಾಮವಾಗಿ ಮಾಡಿದ್ದಾರೆ. ಸ್ಮಾರ್ಲೆಟ್ ಎಫ್ ಸ್ಟೀನ್ ಅವರಿಂದ ಸ್ಫೂರ್ತಿ ಪಡೆದು ಜೀವನ ನಡೆಸಿದ್ದಾರೆ. ತಂದೆಯ ಮಾರ್ಗದರ್ಶನ ಅಳವಡಿಸಿಕೊಂಡು ಕೆಲಸ ಮಾಡಿದ್ದಾರೆ. ನಾನು ಗೌರವಿಸುವ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಪ್ರತಿಷ್ಠಾನಗಳು ಬರೀ ಸಾಧಕರನ್ನು ಗೌರವಿಸುವುದರ ಜತೆಗೆ ಇಲ್ಲಿನ ಯುವ ಜನತೆಗೆ ದೇಶ, ಹೊರ ದೇಶಗಳಲ್ಲಿ ಕೆಲಸ ಮಾಡಲು ಬೇಕಾದ ವೃತ್ತಿ ಕೌಶಲವನ್ನು ಕಲಿಸಬೇಕಾದ ಅಗತ್ಯತೆ ಇದೆ. ಗ್ರಾಮೀಣ ಯುವಕರಿಗೆ ಉದ್ಯೋಗ ಕಲ್ಪಿಸಲು ಅವರಲ್ಲಿ ಆತ್ಮವಿಶ್ವಾಸ, ತರಬೇತಿ, ಮಾರ್ಗದರ್ಶನ ನೀಡಬೇಕು ಎಂದು ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನಡೆಸುವ ಐಪಿಎಸ್ ಅಧಿಕಾರಿ ರವಿಕಾಂತೇಗೌಡ ಅವರಿಗೂ ಹೇಳಿದ್ದೇನೆ. ಅದೇ ರೀತಿ ತಿಮ್ಮೇಗೌಡ ಪ್ರತಿಷ್ಠಾನದ ಪದಾಧಿಕಾರಿಗಳು ಮುನ್ನಡೆಯಬೇಕು. ಜನಮುಖಿ ಆಡಳಿತ ಪ್ರಶಸ್ತಿಗೆ ಆಯ್ಕೆಯಾಗಿರುವ ಕೆ.ಜ್ಯೋತಿ ಅವರನ್ನು ಅಭಿನಂದಿಸಿದ ಅವರು, ಕೆಪಿಎಸ್ಸಿಗೆ ಸರಿಯಾದ ಸಮಯದಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುವ ವ್ಯಕ್ತಿಯಾಗಿದ್ದಾರೆ. ಅವರು ಈ ಒಳ್ಳೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಸೌಮ್ಯನಾಥ ಸ್ವಾಮೀಜಿ, ಸತ್ಕೀರ್ತಿನಾಥ ಸ್ವಾಮೀಜಿ, ಕಾವೇರಿ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಟಿ.ತಿಮ್ಮೇಗೌಡ, ಶಶಿಕಲಾ, ಪ್ರತಿಷ್ಠಾನದ ಪದಾಧಿಕಾರಿಗಳಾದ ಕೆ.ಎಂ.ಕೃಷ್ಣೇಗೌಡ ಕೀಲಾರ, ಟಿ.ಶಂಕರೇಗೌಡ, ಎಚ್ ಆರ್ ಕನ್ನಿಕಾ, ಶಿವಣ್ಣ ಮಂಗಲ, ಪ್ರಕಾಶ್, ದೇವರಾಜು ಇತರರಿದ್ದರು.

ತಿಮ್ಮೇಗೌಡರಿಂದ ಮಾದರಿ ಜನಸೇವೆ
ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ಡಾ.ಎಚ್.ಎಂ.ವೆಂಕಟಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬಂದ ಅಧಿಕಾರಿ ಹಾಗೂ ನಗರ ಪ್ರದೇಶದಿಂದ ಬಂದ ಅಧಿಕಾರಿಗೂ ಬಹಳ ವ್ಯತ್ಯಾಸವಿದೆ. ಗ್ರಾಮೀಣರಿಗೆ ಕಷ್ಟ, ಸುಖಗಳ ಬಗ್ಗೆ ಅರಿವಿರುತ್ತದೆ. ನಗರ ಪ್ರದೇಶದವರಿಗೆ ಪುಸ್ತಕದ ಅನುಭವವಿದ್ದರೆ, ಕಷ್ಟದ ಅರಿವು ಇರುವುದಿಲ್ಲ. ತಿಮ್ಮೇಗೌಡರು ಗ್ರಾಮಾಂತರ ಪ್ರದೇಶದಿಂದ ಬಂದು ಅವಕಾಶ ಸಿಕ್ಕಿದ ನಂತರ ಅವರು ಮಾಡಿದ ಸೇವೆ ಹತ್ತಾರು ರಾಜಕಾರಣಿಗಳು ಮಾಡುವ ಕೆಲಸಕ್ಕೆ ಸಮಾನವಾಗಿದೆ. ಸಿಕ್ಕ ಅವಕಾಶದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಅಲ್ಲಿಯ ಜನರ ಮನಸ್ಸಲ್ಲಿ ಒಳ್ಳೆ ಛಾಪನ್ನು ಮೂಡಿಸಿ ನೆನಪನ್ನು ಬಿಟ್ಟು ಬಂದಿದ್ದಾರೆ. ಇದೇ ವ್ಯಕ್ತಿಯ ಸಾಧನೆ ಮತ್ತು ಸಂಪತ್ತು ಎಂದು ಬಣ್ಣಿಸಿದರು.
ಅಧಿಕಾರಿಗಳಲ್ಲಿ 3 ವರ್ಗದವರು ಇರುತ್ತಾರೆ. ಉತ್ತಮ ಅಧಿಕಾರಿಗಳು, ಪ್ರಾಮಾಣಿಕರು ಮತ್ತು ಬುದ್ಧಿವಂತರಾಗಿರುತ್ತಾರೆ. ಆದರೆ ಕೆಲಸ ನಿಧಾನವಾಗುತ್ತದೆ. ಎರಡನೇ ವರ್ಗದವರಲ್ಲಿ ದಕ್ಷತೆ ಇರುತ್ತದೆ. ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಇನ್ನೊಂದು ವರ್ಗ ದಕ್ಷತೆ ಪ್ರಾಮಾಣಿಕತೆ ಮೈಗೂಡಿಸಿಕೊಂಡು ತಾವು ಮಾಡುವ ಪ್ರತಿಯೊಂದು ಕೆಲಸವನ್ನೂ ತಾರ್ಕಿಕ ಹಂತಕ್ಕೆ ತರುತ್ತಾರೆ. ತಿಮ್ಮೇಗೌಡರು ಈ ವರ್ಗಕ್ಕೆ ಸೇರಿದವರು. ಇಂತಹವರು ಕಡಿಮೆ ಎಂದರು.

ಕೆ.ಜ್ಯೋತಿಗೆ ಜನಮುಖಿ ಆಡಳಿತ ಪ್ರಶಸ್ತಿ
ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಕೆ.ಜ್ಯೋತಿ ಅವರಿಗೆ ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ ಹಾಗೂ ದೇವರಹಳ್ಳಿಯ ಪ್ರಗತಿಪರ ಕೃಷಿಕ ಮಹಿಳೆ ಎಸ್.ಬಿ.ಸುವರ್ಣ ಅವರಿಗೆ ಲಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿಕ ಪ್ರಶಸ್ತಿಯನ್ನು ತಲಾ 20 ಸಾವಿರ ರೂ. ನಗದಿನ ಜತೆಗೆ ಪ್ರದಾನ ಮಾಡಲಾಯಿತು. ಅಂತೆಯೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ನಾಗಮಂಗಲ ತಾಲೂಕು ಕರಡಹಳ್ಳಿಯ ಧನಂಜಯ ರಾಮಚಂದ್ರು ಮತ್ತು ಕೆ.ಆರ್.ಪೇಟೆ ತಾಲೂಕು ಅಂಬಿಗರ ಹಳ್ಳಿಯ ಮುತ್ತೇಶ್‌ಗೌಡ ಪರವಾಗಿ ಅವರ ತಂದೆಯನ್ನು ಸನ್ಮಾನಿಸಲಾಯಿತು. ಮಂಗಲದ ವಿದ್ಯಾರ್ಥಿಗಳಾದ ಎಲ್.ಎನ್.ಮಹೇಂದ್ರ ಹಾಗೂ ಪರೀಕ್ಷಿತಾಗೆ ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಜನಪದ ಸಂಗೀತ ಗಾಯನ ಹಾಗೂ ಟಿ.ತಿಮ್ಮೇಗೌಡರು ನಡೆದು ಬಂದ ಜೀವನ ಹಾದಿಯ ಕುರಿತಾದ ಕಿರುಚಿತ್ರ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net