ಸ್ವಜನ ಪಕ್ಷಪಾತದಲ್ಲಿ ಮುಳುಗಿರುವ ರಾಜಕಾರಣಿಗಳು: ಸಾಹಿತಿ ಪದ್ಮಾ ಶೇಖರ್ ಬೇಸರ

ಮಂಡ್ಯ ನಗರದ ಕೆವಿಎಸ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ.ಹಾ.ಮ.ನಾಗಾರ್ಜುನ ಹಾಗೂ ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯ ನಗರದ ಕೆವಿಎಸ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ.ಹಾ.ಮ.ನಾಗಾರ್ಜುನ ಹಾಗೂ ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
  • ಕರ್ನಾಟಕ ಸಂಘದ ವತಿಯಿಂದ ಆಯೋಜನೆ
ಮಂಡ್ಯ: ಇಂದಿನ ಕೆಲ ರಾಜಕಾರಣಿಗಳಲ್ಲಿ ಸ್ವಜನ ಪಕ್ಷಪಾತ, ಸ್ವಹಿತಾಸಕ್ತಿ ಜತೆಗೆ ಭ್ರಷ್ಟಾಚಾರ ಕಾಣುತ್ತಿದೆ. ಅದು ಎಷ್ಟರ ಮಟ್ಟಿಗೆ ಇದೆ ಎಂದರೆ ಸುಳ್ಳಿನ ಕೋಟೆಯೊಳಗೆ ರಾಜಕಾರಣ ಸುತ್ತಾಡುತ್ತಿದೆ ಎಂದು ಸಾಹಿತಿ ಪದ್ಮಾ ಶೇಖರ್ ಅಭಿಪ್ರಾಯಪಟ್ಟರು.
ನಗರದ ಕೆವಿಎಸ್ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಡಾ.ರಾಗೌ ಸಾಹಿತ್ಯ ಪ್ರಶಸ್ತಿ ಹಾಗೂ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಜನಹಿತ ಎನ್ನುವಂತದ್ದು ನಮ್ಮ ಕಣ್ಣಿಗೆ ದೂರದ ಬೆಟ್ಟವಾಗಿದೆ. ಪರಿವರ್ತನೆ ಎನ್ನುವುದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ರಾಜಕಾರಣ ಹದಗೆಟ್ಟು ಹೋಗಿದೆ. ಅದಕ್ಕಾಗಿಯೇ ಸಿಂಗಾರಿಗೌಡರು ಪದೇ ಪದೆ ನೆನಪಾಗುತ್ತಾರೆ. ಇವರು ಕೆ.ವಿ.ಶಂಕರಗೌಡರ ಜತೆ ಶಿಕ್ಷಣ ಹಾಗೂ ಸಹಕಾರ ಕ್ಷೇತ್ರಕ್ಕೂ ಬೆನ್ನಲುಬಾಗಿ ನಿಂತಿದ್ದರು ಎಂದು ಸ್ಮರಿಸಿದರು.
ಗೂಟದ ಕಾರಿಗೆ ಹಪಹಪಿಸುವ ರಾಜಕಾರಣವನ್ನು ಪ್ರಸ್ತುತದಲ್ಲಿ ನೋಡುತ್ತಿದ್ದೇವೆ. ಆದರೆ ನಾವು ನಂಬುವ ತತ್ವಗಳಿಗಿಂತ ಬದುಕುವ ರೀತಿ ಮುಖ್ಯ ಎಂಬುದನ್ನು ರಾಜಕಾರಣದಲ್ಲಿ ತೋರಿಸಿಕೊಟ್ಟವರು ನಾಗಮಂಗಲದ ಕೆ.ಸಿಂಗಾರಿಗೌಡರು. ಎರಡು ಬಾರಿ ಶಾಸಕರಾಗಿ ರಾಜಕೀಯ ಸೇವೆ ಸಲ್ಲಿಸಿದ ಅವರು, ಸ್ವಂತ ಕಾರನ್ನು ಹೊಂದಿರದ ಪ್ರಬುದ್ಧ ರಾಜಕಾರಣಿಯಾಗಿ ಸರಳ ಜೀವನ ನಡೆಸಿದರು. ಇವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಪುಣ್ಯದ ಕೆಲಸವಾಗಿದೆ. ಸಜ್ಜನ ಧೀಮಂತ ರಾಜಕಾರಣಿ ಸಾಲಿನಲ್ಲಿ ಹಾಗೂ ಸಮಾಜಕ್ಕೆ ನಾನು ಎಂಬಂತೆ ನಡೆದುಕೊಂಡ ಕೆ.ಸಿಂಗಾರಿಗೌಡರು ಇಂದಿಗೂ ಪ್ರಸ್ತುತವಾಗುತ್ತಾರೆ. ಇದರ ನಡುವೆ ಜನಪದ ವಿದ್ವಾಂಸ ರಾಗೌ ಹೆಸರಿನಲ್ಲಿ ಪ್ರಶಸ್ತಿ ನೀಡುವುದು ಸಂತಸ ತಂದಿದೆ ಎಂದು ಶ್ಲಾಘಿಸಿದರು.
ಡಾ.ರಾಗೌ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕವಿ ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಮಂಡ್ಯದ ಮಣ್ಣಿಗಿರುವ ಗುಣವೇ ಅದು. ಸಾಹಸಿಗರನ್ನು ತೆಕ್ಕೆಗೆ ತೆಗೆದುಕೊಳ್ಳುವುದು, ಒಂದಷ್ಟು ಬಿತ್ತನೆಯನ್ನು ಮಾಡುವುದು, ಬೆಳೆಯನ್ನ ಬೆಳೆಯುವುದು ಅಲ್ಲಿ ಹೂ ಹಣ್ಣುಗಳನ್ನು ಹಂಚುವ ಕಲೆ ಈ ಕಬ್ಬಿನ ಹಾಗೂ ಸಕ್ಕರೆ ನೆಲಕ್ಕಿದೆ. ಬರಡು ಭೂಮಿಯಾಗಿದ್ದಂತಹ ಸ್ಥಳವನ್ನು ಸಾಂಸ್ಕೃತಿಕ ಸೇವೆ ಸಲ್ಲಿಸುತ್ತಿರುವ ಡಾ.ಬಿ.ಜಯಪ್ರಕಾಶಗೌಡರನ್ನು ನೆನೆಯಬೇಕಿದೆ. ರಾಗೌ ಅವರಷ್ಟೇ ಮೌನಿಯಲ್ಲ, ಸಿಂಗಾರಿಗೌಡರು ಸಹ ಮೌನಿಯಾಗಿದ್ದರು. ದೊಡ್ಡ ಪ್ರಶಸ್ತಿಗೆ ಆಯ್ಕೆ ಮಾಡಿ ನಮ್ಮನ್ನ ದೊಡ್ಡವರಾಗಿ ಮಾಡಿದ್ದೀರಾ ನಿಮಗೆ ಋಣಿಯಾಗಿರುವೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ಒಂದು ಗಂಟೆ ಕಾರ್ಯಕ್ರಮದಲ್ಲಿ ಭಾಷಣ ಕೇಳಿದರೆ ಸಾಕು ಹತ್ತು ಪುಸ್ತಕಗಳನ್ನು ಓದಿದಷ್ಟೇ ಮಾಹಿತಿ ಸಿಗುತ್ತದೆ. ಆದರೆ ವಿಪರ್ಯಾಸವೆಂದರೆ ಯಾರು ಸಹ ಕಾರ್ಯಕ್ರಮಕ್ಕೆ ಭಾಗವಹಿಸುವುದಾಗಲಿ ಅಥವಾ ನೋಡುವುದಾಗಲಿ ಮಾಡುವುದೇ ಇಲ್ಲ. ಜನರು ನಿರಾಸಕ್ತಿ ತೋರುತ್ತಿರುವುದು ಏಕೆ ಎಂಬುದನ್ನು ನೋಡಬೇಕು. ಅಂತರಂಗ ವಿಶ್ಲೇಷಣೆ ಮಾಡುವ ಅವಶ್ಯಕತೆ ಪ್ರಸ್ತುತದಲ್ಲಿ ಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಉಪನ್ಯಾಸಕಿ ಎಂ.ಎಸ್.ಅನಿತಾ, ಸಿಂಗಾರಿಗೌಡರ ಮಗ ಕೆ.ಎಸ್.ಆನಂದ್, ಸಾಹಿತಿ ಡಾ.ರಾಮೇಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಚಂದಗಾಲು ಲೋಕೇಶ್, ನಿರ್ದೇಶಕ ಕೋಣನಹಳ್ಳಿ ಜಯರಾಮು ಭಾಗವಹಿಸಿದ್ದರು.
ಇದೇ ವೇಳೆ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿಯನ್ನು ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಹಾ.ಮ.ನಾಗಾರ್ಜುನ ಮತ್ತು ಡಾ.ರಾಗೌ ಸಾಹಿತ್ಯ ಪ್ರಶಸ್ತಿಯನ್ನು ಕವಿ ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರಿಗೆ ತಲಾ 20 ಸಾವಿರ ರೂ. ನಗದು ಮತ್ತು ಫಲಕದೊಂದಿಗೆ ಪ್ರದಾನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net