ನಗಿಸುವ ಕಲಾವಿದರ ಹಿಂದೆಯೂ ನೋವಿದೆ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಂಗಸಂಘಟಕ ಶ್ರೀನಿವಾಸ್ ಜಿ.ಕಪ್ಪಣ್ಣ ಹಾಗೂ ರಂಗಕರ್ಮಿ ಶಶಿಧರ್ ಭಾರಿಘಾಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಂಗಸಂಘಟಕ ಶ್ರೀನಿವಾಸ್ ಜಿ.ಕಪ್ಪಣ್ಣ ಹಾಗೂ ರಂಗಕರ್ಮಿ ಶಶಿಧರ್ ಭಾರಿಘಾಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
  • ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜನೆ
ಮಂಡ್ಯ: ಬೆಳಕಿನಲಿ ಜಗದ ಜನಗಳಿಗೆ ನಗು ಕೊಡುವ ಕಲಾವಿದರು ಹಿಂದೆಯೂ ಅದೆಷ್ಟೋ ನೋವನ್ನು ಅನುಭವಿಸುತ್ತಾರೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಡಾ.ಜಯಪ್ರಕಾಶಗೌಡ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಲಾವಿದರಾದವರು ತಮ್ಮ ನೋವು ಹಾಗೂ ಕಷ್ಟಗಳು ಎಷ್ಟೇ ಇದ್ದರು ಕೂಡ ಜಗತ್ತಿಗೆ ಸಾಂತ್ವನ, ಆನಂದ, ನೆಮ್ಮದಿ, ಮೌಲ್ಯವನ್ನ ತಮ್ಮ ಕಲೆಯ ತೋರಿಸುತ್ತಾರೆ ಎಂದರು.
ಬದುಕು ಅರಳಬೇಕೆಂದರೆ ಕಲೆ ಬೆಳಗುತ್ತಿರಬೇಕು. ಅಂತಹ ಕಲೆಗೆ ನಮಸ್ಕಾರಗಳನ್ನು ಹೇಳುತ್ತೇನೆ. ಪ್ರಪಂಚವು ಎಷ್ಟೇ ನಾಗಲೋಟದಲ್ಲಿ ಬುದ್ದಿಮೆತ್ತೆಯಲ್ಲಿ ಮುಂದುವರಿದರೂ ನಮಗೇನೂ ಆಗುವುದಿಲ್ಲ. ಕೊನೆಗೆ ಉಳಿಯುವುದೊಂದೆ ವ್ಯವಸಾಯ, ಕಲೆ. ಇದನ್ನು ಉಳಿಸುವ ಕೆಲಸವನ್ನು ಕರ್ನಾಟಕ ಸಂಘ ಮಾಡುತ್ತದೆ ಎನ್ನುವ ವಿಶ್ವಾಸವೂ ನನಗಿದೆ. ಇದನ್ನು ಬಿತ್ತನೆ ಬೀಜದ ತರಹ ಸಂಗ್ರಹಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಹಾಗೂ ಎಲ್ಲರ ಮೇಲೂ ಇದೆ ಎಂದು ಅಭಿಪ್ರಾಯಪಟ್ಟರು.
ಆಂಧ್ರಪ್ರದೇಶದ ಮುಖ್ಯ ಆಯುಕ್ತ ಜಯರಾಂ ರಾಯಪುರ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ 12 ರಿಂದ 17 ಶತಮಾನಗಳ ನಡುವೆ ಬಸವಣ್ಣ ಅವರ ಆದರ್ಶ ಅರಿತು ಬಹಳ ಸರಳ ಜೀವನವನ್ನು ನಡೆಸುತ್ತಿರುತ್ತಾರೆ. ಜತೆಗೆ ಕಾಯಕವೇ ಕೈಲಾಸವೆಂಬಂತೆ ದುಡಿಯುತ್ತಿರುತ್ತಾರೆ. ಬಸವಣ್ಣ ಅವರು ಯಾವ ಜಾತಿಗೂ ಸೀಮಿತವಾಗಿರಲಿಲ್ಲ. ಜಯಪ್ರಕಾಶಗೌಡ ಅವರು ಎಲ್ಲರನ್ನೂ ಅಪ್ಪಿಕೊಂಡವರು ಹಾಗೂ ಇವರನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಅವಮಾನ, ಹಿನ್ನಡೆ ಅನುಭವಿಸಿ ಕರ್ನಾಟಕ ಸಂಘವನ್ನುಮುಂಚೂಣಿಯಾಗಿ ಕೊಂಡೋಯ್ಯುತ್ತಿರುವ ಇವರ ಕಾಯಕ ಸ್ಮರಣೀಯವಾದುದು ಎಂದು ಶ್ಲಾಘಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಂಗಳೂರು ರಂಗಸಂಘಟಕ ಶ್ರೀನಿವಾಸ್ ಜಿ.ಕಪ್ಪಣ್ಣ ಮಾತನಾಡಿ, ನಾನು ಯಾವುದಕ್ಕೂ ಆಸೆ ಪಟ್ಟವನಲ್ಲ. ಜಯಪ್ರಕಾಶಗೌಡರು ಸಂಘ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಮೌಲ್ಯಯುತವಾಗಿದೆ. ಸೆಪ್ಟಂಬರ್‌ನಲ್ಲಿ ಅಕ್ಕ ಸಮ್ಮೇಳನಕ್ಕೆ ಹಿಂದುಳಿದ ಒಕ್ಕಲಿಗ ಸಮುದಾಯದ ಕಲಾವಿದರನ್ನೇ ಕರೆದುಕೊಂಡು ಹೋಗಬೇಕಿಂದಿರುವೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಮತ್ತೊರ್ವ ಬೆಂಗಳೂರು ರಂಗಕರ್ಮಿ ಶಶಿಧರ್ ಭಾರಿಘಾಟ್ ಮಾತನಾಡಿ, ಪ್ರಶಸ್ತಿ ಸ್ವೀಕರಿಸಲು ನಾನು ಮಾಡಿರುವ ಇಷ್ಟು ಕೆಲಸ ಸಾಕಾಗುವುದಿಲ್ಲ. ನನಗೆ ಪ್ರಶಸ್ತಿ ಬೇಡವೆಂದು ನಯವಾಗಿ ಹಾಗೂ ಪ್ರೀತಿಯಿಂದ ಹೇಳಿದ್ದೆ. ಏಕೆಂದರೆ ನಾನು ಮಾಡಿರುವ ಕೆಲಸ ನನಗೆ ಸಮಾಧಾನವಿಲ್ಲ. ಮತ್ತಷ್ಟು ಕೆಲಸ ಮಾಡಿದ ಮೇಲೆ ಅಂದರೆ ಎರಡು ಅಥವಾ ಮೂರು ವರುಷ ತಡೆಯಿಡಿಯಿರಿ ಎಂದಿದ್ದೆ ಎಂದರು.
ಕರ್ನಾಟಕ ಸಂಘದ ಪೋಷಕ ಬಿ.ರಾಮಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆದಿಚುಂಚನಗಿರಿ ಮಠದ ಸತ್ಕೀರ್ತಿನಾಥ ಸ್ವಾಮೀಜಿ, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಫಸ್ಟ್ ಸರ್ಕಲ್ ಉಪಾಧ್ಯಕ್ಷ ಮದನ್, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಕಾರ್ಯದರ್ಶಿ ಚಂದಗಾಲು ಲೋಕೇಶ್, ತಗ್ಗಹಳ್ಳಿ ವೆಂಕಟೇಶ್, ಜಯರಾಂ ಕೋಣನಹಳ್ಳಿ, ಮಂಜುಳಾ ಉದಯಶಂಕರ್, ಹರೀಶ್‌ಬಾಬು, ಹನಕೆರೆ ನಾಗಪ್ಪ, ನಿವೃತ್ತ ಪ್ರಾಂಶುಪಾಲ ಎಸ್.ಬಿ.ಶಂಕರೇಗೌಡ ಇತರರಿದ್ದರು. ಇದೇ ವೇಳೆ ಜನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ಗಾಯನ ಆಕರ್ಷಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net