ರ್ಯಾಪಿಡೋ ಬೈಕ್, ಓಲಾ ವಿರೋಧ ಆಕ್ರೋಶ: ಆಟೋ ಚಾಲಕರ ಬೃಹತ್ ಪ್ರತಿಭಟನೆ

ಮಂಡ್ಯದಲ್ಲಿ ರಾಜೀವ್‌ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆಯಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಮಂಡ್ಯದಲ್ಲಿ ರಾಜೀವ್‌ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆಯಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
  • ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ
ಮಂಡ್ಯ: ರ‌್ಯಾಪಿಡೋ ಬೈಕ್, ಓಲಾ ಮತ್ತು ಆಪೆ ಆಟೋಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜೀವ್‌ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಶುಗರ್ ಫ್ಯಾಕ್ಟರಿ ವೃತ್ತದಲ್ಲಿ ಜಮಾಯಿಸಿದ ಆಟೋ ಚಾಲಕರು, ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಮೆರವಣಿಗೆ ನಡೆಸಿದರು. ಅಂತೆಯೇ ತಮ್ಮ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಮಂಡ್ಯ ನಗರದಲ್ಲಿ ಸುಮಾರು 3,500 ಆಟೋಗಳಿವೆ. ಈಗಾಗಲೇ ಆಟೋಗಳ ಸಂಖ್ಯೆ ಹೆಚ್ಚಿರುವುದರಿಂದ ದುಡಿಮೆ ಕಡಿಮೆಯಾಗುತ್ತಿದೆ. ಪರಿಣಾಮ ಚಾಲಕರ ನಡುವೆ ಅತೃಪ್ತಿ, ವೈಮನಸ್ಸು, ಬಾಡಿಗೆಗೆ ಗುದ್ಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಕೆಲವರು ಅನಧಿಕೃತವಾಗಿ ವೈಟ್‌ಬೋರ್ಡ್ ಬೈಕ್‌ಗಳು, ಓಲಾ ಮತ್ತು ಆಪೆ ಆಟೋಗಳಲ್ಲಿ ಸಾರ್ವಜನಿಕರ ಸಂಚಾರ ಮಾಡುವ ಕೆಲಸಕ್ಕೆ ಬಳಸುತ್ತಿದ್ದಾರೆ. ಈ ಸಂಬಂಧ ಸಾರಿಗೆ ಅಧಿಕಾರಿಗಳು ದಂಡ ವಿಧಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಂತೆಯೇ ಮಂಡ್ಯ ನಗರದಲ್ಲಿ ಸುಮಾರು 100 ಎಲೆಕ್ಟ್ರಿಕ್ ಆಟೋಗಳ ಸಂಚಾರವಿದೆ. ಇವರಿಗೆ ಜಿಲ್ಲಾದ್ಯಂತ ಓಡಾಡಲು ಅನುಮತಿ ಇದೆ. ಆದರೆ ನಮ್ಮ ಆಟೋಗಳಿಗೆ ನಗರದಿಂದ 12 ಕಿ.ಮೀ ವ್ಯಾಪ್ತಿಯವರೆಗೆ ಮಾತ್ರ ಮಿತಿ ನೀಡಿರುವುದರಿಂದ ಅನ್ಯಾಯವಾಗುತ್ತಿದೆ. ಆದ್ದರಿಂದ ನಮಗೂ ಜಿಲ್ಲಾದ್ಯಂತ ಸಂಚರಿಸಲು ಅವಕಾಶ ಮಾಡಿಕೊಡಬೇಕು. ಬಾಡಿಗೆ ಮನೆಯಲ್ಲಿದ್ದುಕೊಂಡು ಬದುಕು ನಡೆಸುತ್ತಿರುವ ಆಟೋ ಚಾಲಕರಿಗೆ ಸರ್ಕಾರದಿಂದ ನಿವೇಶನ ಕೊಡಿಸಬೇಕು. ನಗರಕ್ಕೆ ಸೇರಿರದ ಆಟೋಗಳು ನಗರದೊಳಗೆ ಬಾಡಿಗೆ ಹೊಡೆಯುತ್ತಿದ್ದು, ಇವುಗಳ ವಿರುದ್ಧ ಕ್ರಮ ವಹಿಸಬೇಕು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಕನಿಷ್ಟ ಬಾಡಿಗೆ ದರವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಗೌರವಾಧ್ಯಕ್ಷ ಕೆ.ಆರ್.ರವೀಂದ್ರ, ಕಾನೂನು ಸಲಹೆಗಾರ ಎಂ.ಬಿ.ಹರಿಪ್ರಸಾದ್, ಅಧ್ಯಕ್ಷ ಟಿ.ಕೃಷ್ಣ, ಕಾರ್ಯಾಧ್ಯಕ್ಷ ಎಂ.ಎನ್.ಸತ್ಯನಾರಾಯಣ, ಕಾರ್ಯದರ್ಶಿ ಎಂ.ರಾಜು, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಇತರರಿದ್ದರು. ನಂತರ ಆರ್‌ಟಿಒ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net