

ಶ್ರೀರಂಗಪಟ್ಟಣ : ಸಾರಿಗೆ ವ್ಯವಸ್ಥೆಯಲ್ಲಿ ಆಟೋ ಚಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ನಮ್ಮ ಶ್ರೀರಂಗಪಟ್ಟಣ ಕ್ಷೇತ್ರದ ಪ್ರವಾಸೋದ್ಯಮದಲ್ಲಿ ನಿಮ್ಮ ಸೇವೆ ಅನನ್ಯ ಎಂದು ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಗುರುವಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಜನುಮ ದಿನಾಚರಣೆ ಪ್ರಯುಕ್ತ ಆಟೋ ಚಾಲಕರಿಗೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಕ್ಷೇತ್ರದ 500ಕ್ಕೂ ಅಧಿಕ ಚಾಲಕರಿಗೆ ವಿತರಿಸಿ ಬಳಿಕ ಅವರು ಮಾತನಾಡಿದರು.
ಸಮಾಜದ ಹಿತಕ್ಕಾಗಿ ಶ್ರಮಿಸುವ ನಾಯಕ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹುಟ್ಟು ಹಬ್ಬದ ಸುಸಂದರ್ಭದಲ್ಲಿ ವಿತರಿಸುತ್ತಿರುವುದು ನಮಗೆ ಸಂತೋಷದ ವಿಷಯವಾಗಿದೆ. ಅಧಿಕಾರ ಇರಲಿ-ಇಲ್ಲದಿರಲಿ ಸಾಕಷ್ಟು ವರ್ಷಗಳಿಂದ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಸಿಕೊಂಡು ಬರುವುದಾಗಿ ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ, ಕ್ಷೇತ್ರದ ಯುವ ಮುಖಂಡ ಎಸ್.ಸಚ್ಚಿದಾನಂದ ತಮಗೆ ಯಾವುದೇ ರಾಜಕೀಯ ಹಿನ್ನಲೆ ಇಲ್ಲದೆ ಬೆಳೆದು ಬಂದಿದ್ದು, ನಿರಂತರವಾಗಿ ಸಮಾಜಮುಖಿ, ಧಾರ್ಮಿಕ ಹಾಗೂ ಆರೋಗ್ಯ ಸೇವೆಗಳು ಸೇರಿದಂತೆ ಸಾಕಷ್ಟು ನೆರವುಗಳನ್ನು ನೀಡಿ ಜನಮನ ಗೆದ್ದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ದಸರಾ ನಾಡ ಕುಸ್ತೀ ಪಂದ್ಯಾವಳಿಯಲ್ಲಿ ಕಿತ್ತೂರು ರಾಣಿ ಕಪ್ ಮೂಲಕ ರಾಜ್ಯ ಪ್ರಶಸ್ತಿಗಳಿಸಿದ ಮೇಳಾಪುರ ಗ್ರಾಮದ ಕುಮಾರಿ ಬಿ.ಚೈತನ್ಯಶ್ರೀ ಹಾಗೂ ಹಾಸನದ ಸಮಾಜಸೇವಕ ಸಾಗರ್ ಅವರನ್ನು ವೇದಿಕೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೈ.ಮಹದೇವು, ನಗರ ಬಿಜೆಪಿ ಘಟಕದ ಅಧ್ಯಕ್ಷ ಸುಧಾಕರ್, ಹಿರಿಯ ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಎಸ್.ಎಲ್.ಲಿಂಗರಾಜು, ಕೆ.ಆರ್ಎಸ್ ರಾಮೇಗೌಡ್ರು, ಶಾಮಿಯಾನ ಪುಟ್ಟರಾಜು, ಪಾಲಹಳ್ಳಿ ಶಂಕರ್, ಪುರಸಭಾ ಮಾಜಿ ಸದಸ್ಯರುಗಳಾದ ಎಸ್.ಟಿ.ರಾಜಣ್ಣ, ಗಂಜಾಂ ಶಿವು, ಎಸ್.ಪ್ರಕಾಶ್, ಎಸ್.ಟಿ.ರಾಜು, ಕಂಠಿ ರಘು, ಯುವ ಮುಖಂಡ ದರ್ಶನ್ ಲಿಂಗರಾಜು, ಪ್ರಭಾಕರ್ ಗುಪ್ತಾ ಎಸ್ಸಿ ಮೋರ್ಚಾ ಅಧ್ಯಕ್ಷ ಯತೀರಾಜು, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾನಸ, ಯುವಮೋರ್ಚಾ ಅಧ್ಯಕ್ಷ ಸಚಿನ್ ಇತರರು ಈ ವೇಳೆ ಉಪಸ್ಥಿತರಿದ್ದರು.