ಬೆಳಗೊಳ ಗ್ರಾಮ ಸಹಾಯಕನ ಮನೆ ಮೇಲೆ ದಾಳಿ

ಬೆಳಗೊಳ ಗ್ರಾಮ ಸಹಾಯಕ ಬಸವಯ್ಯ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವುದು.
ಬೆಳಗೊಳ ಗ್ರಾಮ ಸಹಾಯಕ ಬಸವಯ್ಯ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗೊಳ ಗ್ರಾಮದ ಸರ್ವೇ ನಂ.101
  • ಭೂದಾಖಲೆಗಳನ್ನು ಅಕ್ರಮವಾಗಿ ಖಾತೆ ಮಾಡಿರುವ ದೂರಿನ ಹಿನ್ನೆಲೆ
ಕೆ.ಆರ್.ಸಾಗರ: ಸಮೀಪದ ಬೆಳಗೊಳ ಗ್ರಾಮದ ಸರ್ವೇ ನಂ.101ರಲ್ಲಿನ ಭೂದಾಖಲೆಗಳನ್ನು ಅಕ್ರಮವಾಗಿ ಖಾತೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗೊಳ ಗ್ರಾಮ ಸಹಾಯಕ ಬಸವಯ್ಯ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಿಪಿಐ ಶಶಿಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಸುಮಾರು 3 ತಾಸು ತಪಾಸಣೆ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 10 ಗಂಟೆಗೆ ಬಸವಯ್ಯ ಅವರ ಹೊಲದ ಬಳಿ ಇರುವ ಮನೆಗೆ ಧಾವಿಸಿದ ಲೋಕಾಯುಕ್ತ ಅಧಿಕಾರಿಗಳ ತಂಡ ಬಸವಯ್ಯ ಅವರನ್ನು ವಿಚಾರಣೆ ನಡೆಸಿ ಮನೆಯನ್ನು ಶೋಧಿಸಿದರು. ನಂತರ ಬೆಳಗೊಳ ಗ್ರಾಮದ ಮಜ್ಜಿಗೆಪುರ ರಸ್ತೆಯಲ್ಲಿರುವ ನಾಡ ಕಚೇರಿಗೆ ಭೇಟಿ ನೀಡಿದ ಸಿಪಿಐ ಶಶಿಕುಮಾರ್ ನೇತೃತ್ವದ ತಂಡ ಕಚೇರಿಯಲ್ಲಿನ ಕೆಲವು ದಾಖಲೆಗಳನ್ನು ಪರಿಶೀಲಿಸಿ ದೃಢೀಕೃತಿ ಪ್ರತಿಗಳನ್ನು ಪಡೆದು ಉಪತಹಸೀಲ್ದಾರ್ ವರುಣ್ ಅವರಿಂದ ಮಾಹಿತಿ ಸಂಗ್ರಹಿಸಿತು.
ಬೆಳಗೊಳ ಸರ್ವೇ ನಂ.101 ರಲ್ಲಿ ಸುಮಾರು 6.30 ಎಕರೆಯಷ್ಟು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಹಲವು ವ್ಯಕ್ತಿಗಳಿಗೆ ಸಾಗುವಳಿ ಚೀಟಿ ಮೂಲಕ ಖಾತೆ ಮಾಡಿ ನಂತರ ಖಾಸಗಿ ಶಾಲೆಗೆ ನೀಡಲಾಗಿದೆ ಎನ್ನಲಾಗಿದೆ. ಖಾಸಗಿ ಶಾಲೆಯವರು ಸುಮಾರು 1.36 ಎಕರೆಗೆ ಹೆದ್ದಾರಿ ರಸ್ತೆ ಜಮೀನು ಹೋಗಿರುವುದಾಗಿ ಸುಮಾರು 1 ಕೋಟಿ ರೂ.ಗೂ ಮೆಲ್ಪಟ್ಟು ಹಣ ಪಡೆದಿರುವುದು ಅಕ್ರಮವಾಗಿದೆ ಎಂಬುದಾಗಿ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. ಹಾಗಾಗಿ, ಪಾಂಡವಪುರ ಎಸಿ ಕಚೇರಿ, ಶ್ರೀರಂಗಪಟ್ಟಣ ತಾಲೂಕು ಕಚೇರಿಯ ವಿವಿಧೆಡೆ, ಬೆಳಗೊಳ ನಾಡಕಚೇರಿ, ಮೈಸೂರಿನ ಕಾಳಿದಾಸ ರಸ್ತೆ ಸಮೀಪದಲ್ಲಿರುವ ನಿವೃತ್ತ ರಾಜಸ್ವ ನಿರೀಕ್ಷ ಉಮೇಶ್ ಮತ್ತು ಬೆಳಗೊಳ ಗ್ರಾಮದ ಗ್ರಾಮ ಸಹಾಯಕ ಬಸವಯ್ಯ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net