ನೇಮಕಾತಿಗೆ ಅಧಿಸೂಚನೆ ಹೊರಡಿಸಲಿ: ಉದ್ಯೋಗಾಕಾಂಕ್ಷಿ ಹೋರಾಟ ಸಮಿತಿ ಮನವಿ

 ಮಂಡ್ಯದಲ್ಲಿ ಸಹಾಯಕ ಕಚೇರಿ ಅಧಿಕಾರಿ ಡಾ.ರೋಹಿಣಿ ಅವರಿಗೆ ಉದ್ಯೋಗಾಆಕಾಂಕ್ಷಿ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಮಂಡ್ಯದಲ್ಲಿ ಸಹಾಯಕ ಕಚೇರಿ ಅಧಿಕಾರಿ ಡಾ.ರೋಹಿಣಿ ಅವರಿಗೆ ಉದ್ಯೋಗಾಆಕಾಂಕ್ಷಿ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಸರ್ಕಾರಕ್ಕೆ ಒತ್ತಾಯ
  • ಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ರವಾನೆ
ಮಂಡ್ಯ: ರಾಜ್ಯಸರ್ಕಾರ ತೀರ್ಮಾನಿಸಿದಂತೆ 56,432 ಹುದ್ದೆಗಳಿಗೆ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಉದ್ಯೋಗಾಕಾಂಕ್ಷಿ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸಮಿತಿ ಪದಾಧಿಕಾರಿಗಳು, ಸಹಾಯಕ ಕಚೇರಿ ಅಧಿಕಾರಿ ಡಾ.ರೋಹಿಣಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಲಾಯಿತು.
ಸಮಿತಿ ಸಹ ಸಂಚಾಲಕ ರಂಗಸ್ವಾಮಿ ಮಾತನಾಡಿ, 56,432 ಹುದ್ದೆಗಳಿಗೆ ಕೂಡಲೇ ಅಧಿಸೂಚನೆ ಹೊರಡಿಸಿ ಹಾಗೂ ಕೆಪಿಎಸ್‌ಸಿ ಸ್ವಚ್ಛಗೊಳಿಸಲು ಪಿ.ಸಿ ಹೋಟಾ ಸಮಿತಿ ವರದಿ ಜಾರಿಗೊಳಿಸಬೇಕು. ಮಂಡ್ಯ ನಗರದ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ಹೊಸ ಗ್ರಂಥಾಲಯದ ಕಟ್ಟಡವನ್ನು ಈ ಕೂಡಲೇ ತೆರೆಯಬೇಕು ಹಾಗೂ ಗ್ರಂಥಾಲಯದ ಆವರಣದಲ್ಲಿರುವ ಶೌಚಗೃಹ ದುರಸ್ತಿಗೊಳಿಸಿ ಬಳಸಲು ವ್ಯವಸ್ಥೆ ಮಾಡಬೇಕು. ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗುವಂತೆ ಪ್ರತಿ ತಿಂಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವ ಪುಸ್ತಕಗಳನ್ನು ಗ್ರಂಥಾಲಯಕ್ಕೆ ತರಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ನೇಮಕಾತಿಗಳ ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು. ನೇಮಕಾತಿ ಪರೀಕ್ಷೆ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ಒದಗಿಸಬೇಕು. ರಾಜ್ಯದಲ್ಲಿ ಎಲ್ಲಾ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ್ಷ ನೇಮಕಾತಿ ಪ್ರಕ್ರಿಯೆಯ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ಕಾರಿ ಉದ್ಯೋಗಗಳ ಮೇಲಿನ ಅನುದಾನ ಕಡಿಮೆ ಮಾಡಲು, ತನ್ಮೂಲಕ ಉದ್ಯೋಗ ಕಡಿತಗೊಳಿಸಲು ಪ್ರಮುಖ ಕಾರಣವಾಗಿರುವ ಎಫ್‌ಆರ್‌ಬಿಎಂ ಕಾಯ್ದೆ-2003 ರನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಸಹ ಸಂಚಾಲಕ ಟಿ.ಆರ್.ಸುನಿಲ್ ಮಾತನಾಡಿ, ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ರಾಜ್ಯಾದ್ಯಂತ ನಿರಂತರವಾಗಿ ರಾಜ್ಯ ಹಾಗೂ ಕೇಂದ್ರದ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕಾಯಂ ಹಾಗೂ ಪಾರದರ್ಶಕ ನೇಮಕಾತಿಗಾಗಿ ಆಗ್ರಹಿಸಿ ಹೋರಾಟಗಳನ್ನು ಬೆಳೆಸುತ್ತಾ ಬಂದಿದೆ. ಎಲ್ಲ ಹೋರಾಟಗಳ ಪ್ರತಿಫಲವಾಗಿ ರಾಜ್ಯಸರ್ಕಾರವು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ 56,432 ಹುದ್ದೆ ಭರ್ತಿ ಮಾಡುವುದಾಗಿ ಘೋಷಿಸಿತ್ತು. ನಂತರವೂ ವಿವಿಧ ಇಲಾಖೆಗಳ ಸಚಿವರು ಅತೀ ಶೀಘ್ರದಲ್ಲಿ ನೇಮಕಾತಿ ಮಾಡುತ್ತೇವೆ ಎಂದು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವುದು ಉದ್ಯೋಗಾಕಾಂಕ್ಷಿಗಳಿಗೆ ಭ್ರಮನಿರಸನ ಉಂಟುಮಾಡಿದೆ. ಈ ಘೋಷಣೆ ಮಾಡಿ ಐದು ತಿಂಗಳುಗಳು ಕಳೆದರೂ ಇದುವರೆಗೂ ಯಾವುದೇ ನೇಮಕಾತಿಗಳಿಗೆ ಅಧಿಸೂಚನೆಗಳನ್ನು ಹೊರಡಿಸಿಲ್ಲ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಸರ್ಕಾರದ ಘೋಷಣೆಗಳನ್ನು ನಂಬಲು ಸಾಧ್ಯವಾಗದೆ, ವಿಶ್ವಾಸ ಕಳೆದುಕೊಂಡು ಮತ್ತೆ ಹೋರಾಡಲು ಬೀದಿಗಿಳಿದಿದ್ದಾರೆ ಎಂದರು.
ಕೆಪಿಎಸ್‌ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆಯೂ ವರದಿಗಳು ಬಂದಿದ್ದು ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಹಿಂದೆ ನಡೆಸಿದ ಹಲವಾರು ನೇಮಕಾತಿ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರಗಳು ನಡೆದಿವೆ. ಆದ್ದರಿಂದ ಈ ಕೂಡಲೇ ಕೆಪಿಎಸ್‌ಸಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮುಂದಿನ ಎಲ್ಲ ನೇಮಕಾತಿಗಳು ಪಾರದರ್ಶಕವಾಗಿ ನಡೆಯುವಂತೆ ಖಾತ್ರಿಪಡಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಸಹ ಸಂಚಾಲಕ ಚಂದ್ರಶೇಖರ್, ಉದ್ಯೋಗಾಕಾಂಕ್ಷಿಗಳಾದ ಪುನೀತ್, ನವೀನ್, ಹರೀಶ್, ಶ್ರೇಯಸ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net