ಪುಸ್ತಕ ಮನೆ ನಿರ್ವಹಣೆಗೆ ಅನುದಾನಕ್ಕೆ ಮನವಿ

ಪಾಂಡವಪುರ ತಾಲೂಕಿನ ಹರಳಹಳ್ಳಿ ಬಳಿ ಇರುವ ಪುಸ್ತಕ ಮನೆ ನಿರ್ವಹಣೆಗೆ ಜಮೀನು ಮತ್ತು ಅನುದಾನ ಒದಗಿಸುವಂತೆ ಪದ್ಮಶ್ರೀ  ಪ್ರಶಸ್ತಿ ಪುರಸ್ಕೃತರಾದ ಅಂಕೇಗೌಡ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮನವಿ ಸಲ್ಲಿಸಿದರು.
ಪಾಂಡವಪುರ ತಾಲೂಕಿನ ಹರಳಹಳ್ಳಿ ಬಳಿ ಇರುವ ಪುಸ್ತಕ ಮನೆ ನಿರ್ವಹಣೆಗೆ ಜಮೀನು ಮತ್ತು ಅನುದಾನ ಒದಗಿಸುವಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಂಕೇಗೌಡ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮನವಿ ಸಲ್ಲಿಸಿದರು.
Published on
ಪಾಂಡವಪುರ: ಇಪ್ಪತ್ತು ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರವಿರುವ ಅಂಕೇಗೌಡ ಪುಸ್ತಕ ಮನೆ ನಿರ್ವಹಣೆಗೆ ಎರಡು ಎಕರೆ ಭೂಮಿ ಹಾಗೂ 5 ಕೋಟಿ ರೂ. ಅನುದಾನ ನೀಡುವಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಂಕೇಗೌಡ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು.
ಇತ್ತೀಚೆಗೆ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಅವರು, ಅಂಕೇಗೌಡ ಪುಸ್ತಕ ಮನೆ ರಾಜ್ಯದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ಅಮೂಲ್ಯ ಕೊಡುಗೆ ನೀಡುತ್ತಿದೆ. ಈ ಗ್ರಂಥಾಲಯವು ವಿದ್ಯಾರ್ಥಿಗಳು, ಸಂಶೋಧಕರು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಜ್ಞಾನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ಪೀಳಿಗೆಗೆ ಉಳಿಸುವ ದೃಷ್ಟಿಯಿಂದ ಅಗತ್ಯ ಮೂಲಸೌಕರ್ಯಗಳು ಮತ್ತು ನಿರ್ವಹಣೆ ಅವಶ್ಯಕತೆ ಇದೆ. ಹೀಗಾಗಿ ಗ್ರಂಥಾಲಯದ ಅಮೂಲ್ಯ ಪುಸ್ತಕಗಳ ರಕ್ಷಣೆ ಮತ್ತು ನಿರ್ವಹಣೆಗೆ ಆರ್ಥಿಕ ನೆರವು ಒದಗಿಸಬೇಕು. ಗ್ರಂಥಾಲಯಕ್ಕೆ ಗ್ರಂಥಪಾಲಕರು ಹಾಗೂ ಇತರೆ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಓದುಗರಿಗೆ ಸುಸಜ್ಜಿತ ಕೊಠಡಿ, ಶೌಚಗೃಹ, ಕಂಪ್ಯೂಟರ್, ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ, ಪುಸ್ತಕಗಳ ಸಂರಕ್ಷಣೆ, ವರ್ಗೀಕರಣ ಹಾಗೂ ದಾಖಲೀಕರಣಕ್ಕೆ ಅಗತ್ಯ ವ್ಯವಸ್ಥೆ ಹಾಗೂ ಇತರೆ ಆಡಳಿತಾತ್ಮಕ ವೆಚ್ಚಗಳಿಗಾಗಿ ಅಗತ್ಯವಿರುವ ನೆರವು ಒದಗಿಸುವಂತೆ ಕೋರಿದರು.
ಮನವಿಗೆ ಸಕಾರತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net