ಗ್ರಾಮದ ಪ್ರಮುಖ ಬೀದಿಯಲ್ಲಿ ಅಮ್ಮನವರ ಮೆರವಣಿಗೆ ಸಾಗಿ ಅಮಾನಿಕೆರೆಯಲ್ಲಿ ಗಂಗಾಸ್ನಾನ, ಗಂಗಾಪೂಜೆಗೆ ಸಜ್ಜಾದರು. ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಕಾವ್ಯಸ್ಫೂರ್ತಿಯ ಅಶ್ವಥವೃಕ್ಷದ ಸೋಪಾನಕಟ್ಟೆ ಬಳಿ ದೇವಿಯನ್ನು ಪೂಜೆಗಾಗಿ ಇಡಲಾಯಿತು. ಕಳಸಗಳನ್ನು ಇಟ್ಟು ಗಂಗೆಯನ್ನು ತುಂಬಲಾಯಿತು. ಬಳಿಕ ಹೊಂಬಾಳೆ, ಹೂವಿನಿಂದ ಅಲಂಕರಿಸಲಾಯಿತು. ಅಂಗಾಳಪರಮೇಶ್ವರಿ ಉತ್ಸವಮೂರ್ತಿಗೆ ಪುಷ್ಪಾಲಂಕಾರ ನೆರವೇರಿಸಲಾಯಿತು. ಕಳಸಕ್ಕೆ ದೇವಿಯ ಅವಾಹನೆ ಮಾಡಲಾಯಿತು. ಉತ್ಸವಮೂರ್ತಿ, ಕಳಸಗಳನ್ನು ಅಷ್ಟದ್ರವ್ಯಗಳಿಂದ ಪೂಜಿಸಲಾಯಿತು.