ಹಲಗೂರು: ಇಲ್ಲಿನ ಮಳವಳ್ಳಿ ರಸ್ತೆಯಲ್ಲಿರುವ ನಾಡಕಚೇರಿಯಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಉಪ ತಹಸೀಲ್ದಾರ್ ಕೆ.ನಟರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರು ಸಮಾಜದಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಎಲ್ಲ ವರ್ಗದವರಿಗೆ ನ್ಯಾಯ ಸಿಗುವಂತೆ ಸಂವಿಧಾನ ರಚಿಸಿದ್ದಾರೆ. ನಾಡಕಚೇರಿಯಲ್ಲಿ ಕೆಲಸ ಮಾಡಲು ಅವರು ಸಂವಿಧಾನಾತ್ಮಕವಾಗಿ ನಮಗೆ ಮಾರ್ಗದರ್ಶನವಾಗಿದ್ದಾರೆ. ಹೀಗಾಗಿ ರೈತರಿಗಾಗಲಿ, ಹಿಂದುಳಿದ ವರ್ಗದವರಾಗಲಿ, ದಲಿತರಾಗಲಿ ನಮ್ಮ ಬಳಿ ಬಂದಾಗ ಅವರಿಗೆ ಬೇಕಾದ ಅಗತ್ಯ ದಾಖಲೆಗಳನ್ನು ಸಕಾಲಕ್ಕೆ ನೀಡಬೇಕು. ನಮ್ಮ ಕಚೇರಿಗೆ ಯಾರೇ ಬರಲಿ ಅವರ ಕೆಲಸ ಕಾರ್ಯಗಳಿಗೆ ವಿಳಂಬವಾಗದಂತೆ ಅಗತ್ಯವಾದ ದಾಖಲೆಗಳನ್ನು ಒದಗಿಸುವಂತೆ ತಿಳಿಸಿದರು.
ರಾಜಸ್ವ ನಿರೀಕ್ಷಕ ಮಧುಸೂದನ್, ಗ್ರಾಮ ಆಡಳಿತಾಧಿಕಾರಿ ಸೋಮಣ್ಣ, ಸಿದ್ದರಾಯಿಮೌಳಿ, ಲತಾ, ಗ್ರಾಮಸೇವಕರಾದ ಶಿವಪ್ರಕಾಶ್, ಮಹಾದೇವಸ್ವಾಮಿ, ಕನಕ, ಪುಟ್ಟಸ್ವಾಮಿ, ಅನಿಲ್, ಬಿ.ಎಸ್.ನವೀನ, ನಂಜುಂಡ, ನಂದನ್ ಇದ್ದರು.