ಕಿಕ್ಕೇರಿ: ಶಿಕ್ಷಣವನ್ನು ಖಡ್ಗದಂತೆ ಅಸ್ತ್ರವಾಗಿಸಿಕೊಂಡು ಅಂಬೇಡ್ಕರ್ ನಾಡಿನ ಬೆಳಕಾಗಿ ಸಮ ಸಮಾಜ ನಿರ್ಮಿಸಿದ ಮಹಾನ್ ಚೇತನ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.
ಹೋಬಳಿಯ ಗಂಗೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸ್ಪಶ್ಯತೆ ಬದುಕನ್ನು ಹೊದ್ದುಕೊಂಡು ನಿಕೃಷ್ಟ ಬದುಕು, ಅಸಮಾನತೆ ಬದುಕನ್ನು ಸವಾಲಾಗಿ ಸ್ವೀಕರಿಸಿದರು. ಛಲಬಿಡದೆ ಶಿಕ್ಷಣ ಪಡೆದು ದೀನ, ದುರ್ಬಲ ಸಮುದಾಯಕ್ಕೆ ಸಂವಿಧಾನದ ಮೂಲಕ ನ್ಯಾಯ ನೀಡಿದರು ಎಂದರು.
ಆರ್‌ಟಿಒ ಮಲ್ಲಿಕಾರ್ಜುನ ಮಾತನಾಡಿ, ಅಂಬೇಡ್ಕರ್ ಜ್ಞಾನದ ಬೆಳಕು. ಇವರ ನೀಡಿದ ಸಂವಿಧಾನ ಸಕಲ ಜೀವಿಗಳ ಉಸಿರಾಗಿದೆ. ಬದುಕುವ, ಶಿಕ್ಷಣ, ಮಹಿಳೆಯರಿಗೆ ಶಿಕ್ಷಣ ಆರ್ಥಿಕ, ಸಾಮಾಜಿಕ, ಧಾರ್ಮಿಕ ಎನ್ನದೆ ಎಲ್ಲ ಸ್ವಾತಂತ್ರ್ಯದ ಹಕ್ಕನ್ನು ನೀಡಿದ ಪಿತಾಮಹ ಅಂಬೇಡ್ಕರ್ ಎಂದು ಬಣ್ಣಿಸಿದರು.
ಗಂಗೇನಹಳ್ಳಿ ಗ್ರಾಮದಿಂದ ಕಿಕ್ಕೇರಿಯವರೆಗೆ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ರಾಮು, ಸಂಜನ್‌ಕುಮಾರ್, ನಾಗರಾಜು, ಪ್ರದೀಪ್, ಶಶಿ, ರವಿ, ಪರಮಿ, ಚೇತನ್, ಕೃಷ್ಣಯ್ಯ ಮತ್ತಿತರರಿದ್ದರು.