ವಿದ್ಯೆ ಜತೆಗೆ ವ್ಯಾವಹಾರಿಕ ಜ್ಞಾನ ಮುಖ್ಯ

ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳ ಸಂತೆ ನಡೆಯಿತು. ನವೀನ್‌ಕುಮಾರ್, ಜಯರಾಂ ಮತ್ತಿತರರಿದ್ದರು.
ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳ ಸಂತೆ ನಡೆಯಿತು. ನವೀನ್‌ಕುಮಾರ್, ಜಯರಾಂ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗೋಬಿ ಮಂಚೂರಿ, ವಡೆ, ಚುರುಮುರಿ, ಸೊಪ್ಪು, ತರಕಾರಿಯನ್ನು ತಂದು ಖುಷಿಯಿಂದ ಮಾರಾಟ
ಕಿಕ್ಕೇರಿ: ಮಕ್ಕಳಿಗೆ ಪಠ್ಯದ ಜತೆಗೆ ವ್ಯಾವಹಾರಿಕ ಜ್ಞಾನ ಮುಖ್ಯ ಎಂದು ಶಿಕ್ಷಣ ಸಂಯೋಜಕ ನವೀನ್‌ಕುಮಾರ್ ತಿಳಿಸಿದರು. 
ಹೋಬಳಿಯ ಕಾಳೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಕೇವಲ ಅಂಕ ಗಳಿಸಿದರೆ ಸಾಲದು, ಬಾಲ್ಯದಿಂದಲೇ ಬದುಕಿನ ಕಲೆಗಾಗಿ ಕನಿಷ್ಠ ವ್ಯವಹಾರ ಜ್ಞಾನವನ್ನಾದರೂ ಕಲಿಯಬೇಕು. ಸುತ್ತಮುತ್ತಲ ದೈನಂದಿನ ಬದುಕಿಗೆ ಬೇಕಿರುವ ಸಾಮಾನು, ಸರಂಜಾಮು ಖರೀದಿಸುವ ಜ್ಞಾನ ಬೇಕಿದೆ. ಮಕ್ಕಳ ಸಂತೆ ಮಕ್ಕಳಿಗೆ, ಪಾಲಕರಿಗೆ ಖುಷಿ ಕೊಡುವ ಜತೆಗೆ ಹಣಕಾಸಿನ ವ್ಯವಹಾರ ತಿಳಿಯಲಿದೆ ಎಂದರು. 
ಶಾಲೆಗೆ ಬಂದು ಅಕ್ಷರ ಕಲಿ, ಸಂತೆ ಮಾಡಿ ಲೆಕ್ಕ ಕಲಿ ಎನ್ನುವಂತೆ ಖುಷಿ ಪಡಿಸುವ ಕಾರ್ಯಕ್ರಮ ಇರಲಿ. ಇಂತಹ  ಮೇಳಗಳು ವ್ಯಾಪಾರ ವಹಿವಾಟು, ಲೆಕ್ಕಾಚಾರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆತ್ಮಸ್ಥೈರ್ಯ ಕಲಿಸಲಿದೆ. ಹಣದ ಬೆಲೆ ತಿಳಿಯಬಹುದಾಗಿದೆ. ವ್ಯಾವಹಾರಿಕ ಜ್ಞಾನ, ಅಳತೆ, ತೂಕ ಪ್ರಮಾಣಗಳ ಅರಿವು, ಬಂಡವಾಳ ಹೂಡಿಕೆ, ಲಾಭ ನಷ್ಟಗಳ ಅರಿವು, ಸಂವಹನ ಕೌಶಲ ವೃದ್ಧಿಸಲಿದೆ. ವಸ್ತುಗಳ ಬೆಲೆ ನಿರ್ಧಾರ, ಶ್ರಮದ ಬದುಕಿನ ಅರಿವು, ಗಣಿತದ ಮೂಲ ಕ್ರಿಯೆಗಳ ಬಳಕೆ, ನಿತ್ಯ ಜೀವನದಲ್ಲಿ ಗಣಿತ ಬಳಕೆ ಕಲಿಯುವುದರ ಜತೆಗೆ ಸುಲಭವಾಗಿ ಕೂಡುವಿಕೆ, ಕಳೆಯುವಿಕೆ, ಗುಣಾಕಾರ, ಭಾಗಾಕಾರ ಸುಲಭವಾಗಿ ಖುಷಿಯಿಂದ ಮಕ್ಕಳು ಕಲಿಯಬಹುದಾಗಿದೆ. 
ಮುಖ್ಯ ಶಿಕ್ಷಕ ಜಯರಾಂ ಮಾತನಾಡಿ, ಗ್ರಾಹಕ ವ್ಯಾಪಾರಿಗಳ ನಡುವಿನ ಸಂವಹನ ಕೌಶಲ, ಗ್ರಾಹಕರನ್ನು ಸೆಳೆಯುವ ಕಲೆ ಸುಲಭವಾಗಿ ಕರಗತ ಮಾಡಿಕೊಳ್ಳಬಹುದಾಗಿದ್ದು, ಪಾಲಕರು ಮಕ್ಕಳಿಗೆ ಇದೇ ರೀತಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.  
ಮಕ್ಕಳು ಮನೆಯಿಂದಲೇ ಪಾಲಕರಿಂದ ತಯಾರಿಸಿಕೊಂಡು ತಂದಿದ್ದ ಗೋಬಿ ಮಂಚೂರಿ, ವಡೆ, ಚುರುಮುರಿ, ಸೊಪ್ಪು, ತರಕಾರಿಯನ್ನು ತಂದು ಖುಷಿಯಿಂದ ಮಾರಾಟ ಮಾಡಿದರು. 
ಪಾಲಕರು ಖುಷಿಯಿಂದ ಮಕ್ಕಳು ತಂದು ಜೋಡಿಸಿಟ್ಟಿದ್ದ ಸಂತೆಯಲ್ಲಿ ಚೌಕಾಸಿ ಮಾಡಿ ಖರೀದಿಸಿ ಉತ್ತೇಜಿಸಿದರು. 
ಎಸ್‌ಡಿಎಂಸಿ ಸದಸ್ಯರು, ಗ್ರಾಪಂ. ಸದಸ್ಯರು, ಗ್ರಾಮ ಮುಖಂಡರು ಹಾಜರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net