ಬಂದೀಗೌಡ ಬಡಾವಣೆಯಲ್ಲಿರುವ ಜಿಲ್ಲಾ ಶಾಖೆ ಕಚೇರಿಯಲ್ಲಿ ಆಯೋಜನೆ
ಮಂಡ್ಯ: ಅವಶ್ಯಕತೆ ಇರುವವರಿಗೆ ಸೇವೆ ಸಲ್ಲಿಸುವುದೇ ಅಲಯನ್ಸ್‌ನ ಧ್ಯೇಯ. ಅಂತೆಯೇ ಸೇವಾ ಮನೋಭಾವ ಮತ್ತು ನಾಯಕತ್ವ ಗುಣ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಬಿ.ಎಸ್.ಶಿವಕುಮಾರ್ ಹೇಳಿದರು.
ನಗರದ ಬಂದೀಗೌಡ ಬಡಾವಣೆಯಲ್ಲಿರುವ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಜಿಲ್ಲಾ ಶಾಖೆ ಕಚೇರಿಯಲ್ಲಿ ಆಯೋಜಿಸಿದ್ದ ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಮತ್ತು ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಪಂಚದಲ್ಲಿ ಕೆಲವೇ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳಿವೆ. ಅದರಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ಭಾರತದಲ್ಲಿ ಪ್ರಾರಂಭವಾಗಿ ವಿಶ್ವದೆಲ್ಲೆಡೆ ಸದಸ್ಯರನ್ನು ಹೊಂದಿದೆ. ಭಾರತೀಯರಿಂದಲೇ ಸ್ಥಾಪನೆಯಾದ ಈ ಸಂಸ್ಥೆ, ಪ್ರಸ್ತುತ 32ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾತ್ರವಲ್ಲದೆ ವೇಗವಾಗಿ ಬೆಳೆಯುತ್ತಿರುವ ಸೇವಾ ಸಂಸ್ಥೆಯಾಗಿದ್ದು, 50,000ಕ್ಕೂ ಹೆಚ್ಚು ಸದಸ್ಯರು ಮತ್ತು 1800ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಕ್ಯಾನ್ಸರ್ ನಿರ್ಮೂಲನೆ ಮತ್ತು ವಯೋವೃದ್ದರ ಸೇವೆಗೆ ಹೆಚ್ಚು ಮಹತ್ವ ನೀಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅಲಯನ್ಸ್ ಸಂಸ್ಥೆ ವಿಶ್ವದಾದ್ಯಂತ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಈ ಮೂಲಕ ತಪಾಸಣೆ ಮಾಡಿಸಬೇಕೆಂದು ಒತ್ತಾಯಿಸುತ್ತಿದೆ. ಮೂರನೇ ಹಂತ ತಲುಪಿದಾಗ ಕ್ಯಾನ್ಸರ್ ಲಕ್ಷಣ ಪತ್ತೆಯಾಗುತ್ತಿದೆ. ಆದರೆ ಆಗ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿಯಾಗಿರುತ್ತದೆ ಎಂದು ವೈದ್ಯರು ಹೇಳಿದಾಗ ನೋವು ತರುತ್ತದೆ. ಅದಕ್ಕಾಗಿ ಕ್ಯಾನ್ಸರ್ ರೋಗದ ತಪಾಸಣೆಗೊಳಪಡಬೇಕು. ಅಂತೆಯೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಕ್ಯಾನ್ಸರ್‌ರೋಗ ಪತ್ತೆ ಯೋಜನೆಯನ್ನು ಉಚಿತವಾಗಿ ನಡೆಸಿಕೊಡಬೇಕು ಎಂದು ಆಗ್ರಹಿಸಿದರು.
ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಲಯನ್ಸ್ ಸಂಸ್ಥೆಯು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯು ಅತಿ ಕಡಿಮೆ ಸದಸ್ಯತ್ವ ಶುಲ್ಕದೊಂದಿಗೆ ವಾರ್ಷಿಕ ಸುಮಾರು 1,000 ರೂ. ನಿಗದಿಪಡಿಸಿದೆ. ನಾಯಕತ್ವ ಅಭಿವೃದ್ಧಿ ಮತ್ತು ಸೇವಾ ಚಟುವಟಿಕೆಗಳಿಗೆ ಇದು ಒತ್ತು ನೀಡುತ್ತಿದೆ ಎಂದು ತಿಳಿಸಿದರು.
ಅಲಯನ್ಸ್ ಸಂಸ್ಥೆ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, 1ನೇ ಜಿಲ್ಲಾ ಉಪ ಪ್ರಾಂತಪಾಲ ಚಂದ್ರಶೇಖರ್, ಧನಂಜಯ್, ಶಂಕರೇಗೌಡ, ವೆಂಕಟೇಶ್, ಜಗದೀಶ್, ಹೊಂಬೇಗೌಡ, ಲಿಂಗೇಗೌಡ, ಶಿವಶಂಕರ್, ಗೋಪಿ ಸಿದ್ದಪ್ಪ ಇದ್ದರು.