ದೇಗುಲಕ್ಕೆ ಪ್ರವೇಶ ನಿರಾಕರಣೆ ಆರೋಪ, ದೂರು

ಮದ್ದೂರು ತಾಲೂಕಿನ ಹುಲಿಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನನದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸತೀಶ್‌ಕುಮಾರ್ ಕುಟುಂಬದವರಿಂದ ಅಧಿಕಾರಿಗಳ ಮಧ್ಯಸ್ಥಿತಿಕೆಯಲ್ಲಿ ಪೂಜೆ ಮಾಡಿಸಲಾಯಿತು.
ಮದ್ದೂರು ತಾಲೂಕಿನ ಹುಲಿಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನನದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸತೀಶ್‌ಕುಮಾರ್ ಕುಟುಂಬದವರಿಂದ ಅಧಿಕಾರಿಗಳ ಮಧ್ಯಸ್ಥಿತಿಕೆಯಲ್ಲಿ ಪೂಜೆ ಮಾಡಿಸಲಾಯಿತು.
Published on
ಮದ್ದೂರು: ತಾಲೂಕಿನ ಹುಲಿಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಪರಿಶಿಷ್ಟ ಜಾತಿಯವರು ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದಾರೆ ಎಂದು ಅರೋಪಿಸಿ ಗ್ರಾಮದ ಸತೀಶ್‌ಕುಮಾರ್ ಎಂಬುವರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು ಅವರಿಗೆ ದೂರು ನೀಡಿದ್ದಾರೆ.
ಮಾರ್ಚ್ 10 ರಂದು ಸತೀಶ್‌ಕುಮಾರ್, ಪತ್ನಿ ಶ್ವೇತಾ, ಮಕ್ಕಳಾದ ಯಶಿಕಾ, ಗೋಕುಲ್ ಕುಟುಂಬ ಸಮೇತ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಡಿ ಎಂದು ಪೂಜಾರಿ ಯಶ್ವಂತ ಅವರನ್ನು ಕೇಳಿದಾಗ ನಾವು ಪರಿಶಿಷ್ಟ ಜಾತಿಯವರು ಎಂದು ಕೀಳಾಗಿ ಕಂಡು ಸ್ನಾನದ ನೆಪಹೊಡ್ಡಿ ಸ್ನಾನ ಮಾಡಿ ಬರುವುದಾಗಿ ಸುಳ್ಳು ಹೇಳಿ ಹೋದವರು ವಾಪಸ್ ದೇಗುಲಕ್ಕೆ ಬರಲಿಲ್ಲ. ಇದರಿಂದ ಕಾದು ಕಾದು ಸುಸ್ತಾಗಿ ಮನನೊಂದು ನಾನು ಮತ್ತು ಕುಟುಂಬ ಸದಸ್ಯರು ಮನೆಗೆ ವಾಪಸ್ ಬಂದೆವು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾಮದಲ್ಲಿ ಸುಮಾರು 56 ಪರಿಶಿಷ್ಟ ಜಾತಿ ಕುಟುಂಬಗಳಿದ್ದು, ಮುಜರಾಯಿ ಇಲಾಖೆಗೆ ಸೇರಿದ್ದ ಬಸವೇಶ್ವರಸ್ವಾಮಿ ದೇವಸ್ಥಾನಕ್ಕೆ ಪರಿಶಿಷ್ಟ ಜನಾಂಗದವರನ್ನು ಸೇರಿಸುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಮಧ್ಯಪ್ರವೇಶ ಮಾಡಿ ದೇವಸ್ಥಾನಕ್ಕೆ ನಮ್ಮ ಜನಾಂಗದವರು ಹೋಗಲು ಮುಕ್ತ ಅವಕಾಶ ನೀಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದರು.
ಈ ಸಂಬಂಧ ಶುಕ್ರವಾರ ಗ್ರಾಮಕ್ಕೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಡಿವೈಎಸ್‌ಪಿ ಯಶವಂತ್‌ಕುಮಾರ್, ಸಿಪಿಐಗಳಾದ ನವೀನ್, ಮಹೇಶ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಗಮಿಸಿ ಸಭೆ ನಡೆಸಿ ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳಿಗೆ ಎಲ್ಲ ಜನಾಂಗದವರಿಗೆ ಮುಕ್ತವಾಗಿ ಪ್ರವೇಶ ಮಾಡಲು ಅವಕಾಶ ಇದೆ. ಇದರಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದು ದೇಗುಲದ ಅರ್ಚಕರಿಗೆ ಹಾಗೂ ಗ್ರಾಮಸ್ಥರಿಗೆ ತಿಳಿಸಿ. ಇಂತಹ ಘಟನೆ ಮತ್ತೆ ನಡೆಯದಂತೆ ಮನವಿ ಮಾಡಿದರು. ನಂತರ ಸತೀಶ್‌ಕುಮಾರ್ ಅವರ ಕುಟುಂಬ ಸದಸ್ಯರನ್ನು ದೇಗುಲದಲ್ಲಿ ದೇವರಿಗೆ ಪೂಜೆ ಮಾಡಿಸಲು ಅಧಿಕಾರಿಗಳ ನೇತೃತ್ವದಲ್ಲಿ ಅವಕಾಶ ಕಲ್ಪಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net