ಜಿಲ್ಲಾದ್ಯಂತ ಪ್ರತಿ ಕಾಲೇಜಿನಲ್ಲಿ ಏಡ್ಸ್ ಅರಿವು ಕಾರ್ಯಕ್ರಮ

ಪಾಂಡವಪುರ ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಕಾಲೇಜಿನಲ್ಲಿ ಆಯೋಜಿಸಿದ್ದ ಏಡ್ಸ್ ಅರಿವು ಮಾಸಾಚರಣೆ ಕಾರ್ಯಕ್ರಮದಲ್ಲಿ ಅರಿವು ಮೂಡಿಸುವ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಡಾ.ಕುಮಾರ್, ಡಾ.ಸಿ.ಎ.ಅರವಿಂದ್, ಡಾ.ಆರ್.ಸೀಮಾ,  ಎನ್.ಸಿ.ಶಿವಮ್ಮ ಇತರರಿದ್ದರು.
ಪಾಂಡವಪುರ ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಕಾಲೇಜಿನಲ್ಲಿ ಆಯೋಜಿಸಿದ್ದ ಏಡ್ಸ್ ಅರಿವು ಮಾಸಾಚರಣೆ ಕಾರ್ಯಕ್ರಮದಲ್ಲಿ ಅರಿವು ಮೂಡಿಸುವ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಡಾ.ಕುಮಾರ್, ಡಾ.ಸಿ.ಎ.ಅರವಿಂದ್, ಡಾ.ಆರ್.ಸೀಮಾ, ಎನ್.ಸಿ.ಶಿವಮ್ಮ ಇತರರಿದ್ದರು.
Published on

ಜಿಲ್ಲಾ ಎಚ್‌ಐವಿ ನಿಯಂತ್ರಣ ಅಧಿಕಾರಿ ಡಾ.ಕುಮಾರ್ ಮಾಹಿತಿ

ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಐಐಸಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಬೆಂಗಳೂರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಮಂಡ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಎಚ್‌ಐವಿ/ಏಡ್ಸ್ ಅರಿವಿನ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾದ್ಯಂತ ಏಡ್ಸ್ ಅರಿವಿನ ಮಾಸಾಚರಣೆ ನಡೆಯುತ್ತಿದ್ದು, ಯುವಕರಿಗೆ ಇದರ ಅರಿವಿನ ಅವಶ್ಯಕತೆ ಇದೆ. ಈ ಅರಿವಿನ ಉದ್ದೇಶ ಸಫಲಗೊಳಿಸಲು ಪ್ರತಿ ಕಾಲೇಜುಗಳಲ್ಲೂ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಅದರಂತೆ ಚಿನಕುರಳಿಯ ಎಸ್‌ಟಿಜಿ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಒಂದು ಕಾಲದಲ್ಲಿ ಸ್ಯಾನಿಟರಿ ಪ್ಯಾಡ್ ಬಗ್ಗೆ ಮಾತನಾಡಬೇಕಿದ್ದರೆ ಜನರಲ್ಲಿ ಸಂಕುಚಿತತೆ ಇತ್ತು. ಅದರಲ್ಲೂ ಮೆಡಿಕಲ್ ಸ್ಟೋರ್‌ಗಳಿಗೆ ತೆರಳಿ ಈ ಪ್ಯಾಡ್ ಪಡೆಯಲು ಮಹಿಳೆಯರು ಹಿಂಜರಿಯುತ್ತಿದ್ದರು. ಈಗ ಕಾಲ ಬದಲಾಗಿದೆ. ಇದೇ ರೀತಿ ಸುರಕ್ಷಿತ ಲೈಂಗಿಕ ಸಂಪರ್ಕದ ಅರಿವಿನ ಅಗತ್ಯವಿದೆ. ಯುವಕರು ಈ ವಿಷಯದ ಬಗ್ಗೆ ಸೂಕ್ತವಾಗಿ ತಿಳಿದುಕೊಂಡರೆ ಒಳ್ಳೆಯದು. ಸರ್ಕಾರ ನಡೆಸುತ್ತಿರುವ ಈ ಕಾರ್ಯ ಉತ್ತಮವಾಗಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆರ್.ಟಿ.ಸೀಮಾ ಮಾಸಾಚರಣೆ ಉದ್ದೇಶ ವಿವರಿಸಿದರು.
ಈ ವೇಳೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಎಚ್‌ಐವಿ/ಏಡ್ಸ್ ಬಗ್ಗೆ ಅರಿವು ಕುರಿತ ರೀಲ್ಸ್ ಸ್ಫರ್ಧೆಯನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ನೀತುಶ್ರೀ ಮತ್ತು ತಂಡದವರಿಗೆ ಮೊದಲ ಬಹುಮಾನವಾಗಿ 3000 ರೂ. ನಗದು ಹಾಗೂ ಪ್ರಮಾಣಪತ್ರ, ಎರಡನೇ ಬಹುಮಾನ ವಿಜೇತರಾದ ಧನಲಕ್ಷ್ಮೀ ಮತ್ತು ತಂಡದವರಿಗೆ 2000 ನಗದು ಹಾಗೂ ಪ್ರಮಾಣಪತ್ರ, ತೃತೀಯರಾಗಿ ವಿಜೇತರಾದ ಅನನ್ಯಾ ಮತ್ತು ತಂಡದವರಿಗೆ 1000 ರೂ. ನಗದು ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆರ್.ಟಿ.ಸೀಮಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಸಿ.ಶಿವಮ್ಮ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net