ಕುಡಿಯುವ ನೀರು ಪೂರೈಕೆ ನಿರ್ಲಕ್ಷಿಸಿದರೆ ಕ್ರಮ

 ಮಂಡ್ಯದಲ್ಲಿ ಕುಡಿಯುವ ನೀರಿನ ಸಂಬಂಧಿಸಿದ ಜಿಪಂ ಸಿಇಒ ಕೆ.ಆರ್.ನಂದಿನಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಮುಖ್ಯ ಯೋಜನಾಧಿಕಾರಿ ಧನುಷ್, ಉಪ ಕಾರ್ಯದರ್ಶಿ(ಅಭಿವೃದ್ಧಿ) ಟಿ.ಲಕ್ಷ್ಮೀ, ಮುಖ್ಯಲೆಕ್ಕಾಧಿಕಾರಿ ಶ್ರೀನಿವಾಸ ನಾಯ್ಕ ಇದ್ದರು.
ಮಂಡ್ಯದಲ್ಲಿ ಕುಡಿಯುವ ನೀರಿನ ಸಂಬಂಧಿಸಿದ ಜಿಪಂ ಸಿಇಒ ಕೆ.ಆರ್.ನಂದಿನಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಮುಖ್ಯ ಯೋಜನಾಧಿಕಾರಿ ಧನುಷ್, ಉಪ ಕಾರ್ಯದರ್ಶಿ(ಅಭಿವೃದ್ಧಿ) ಟಿ.ಲಕ್ಷ್ಮೀ, ಮುಖ್ಯಲೆಕ್ಕಾಧಿಕಾರಿ ಶ್ರೀನಿವಾಸ ನಾಯ್ಕ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • drinking-water
ಮಂಡ್ಯ: ಜಿಲ್ಲೆಯಲ್ಲಿ ಮುಂದಿನ ಬೇಸಿಗೆ ಹಂಗಾಮಿನಲ್ಲಿ ಜನರಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಒಂದು ವೇಳೆ ಕುಡಿಯುವ ನೀರಿನ ಪೂರೈಕೆಯಲ್ಲಿ ನಿರ್ಲಕ್ಷೃ ತೋರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಎಚ್ಚರಿಕೆ ನೀಡಿದ್ದಾರೆ.
ಬೇಸಿಗೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಕುರಿತಂತೆ ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಭ್ಯವಿರುವ ಕುಡಿಯುವ ನೀರಿನ ಮೂಲಗಳನ್ನು ಪರಿಶೀಲಿಸಿ. ಅಂತೆಯೇ ಬೋರ್‌ವೆಲ್ ಹಾಗೂ ಪೈಪ್‌ಲೈನ್‌ಗಳ ದುರಸ್ತಿ ಮಾಡಬೇಕಿದ್ದರೆ ತಕ್ಷಣವೇ ಕ್ರಮವಹಿಸಿ. ನೀರು ಸರಬರಾಜು ವ್ಯವಸ್ಥೆ ಸುಗಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದು ಹೇಳಿದರು.
ಬೇಸಿಗೆ ಅವಧಿಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇದೆ. ಕೆರೆ, ಕುಂಟೆ, ಬಾವಿಗಳು ಒಣಗುತ್ತವೆ. ಭೂಗರ್ಭ ಜಲಮಟ್ಟ ಕುಸಿತ ಅತಿಯಾದ ಬೋರ್‌ವೆಲ್ ಬಳಕೆ, ನೀರಿನ ದುರ್ಬಳಕೆ, ಕೃಷಿ ಮತ್ತು ಗೃಹ ಬಳಕೆಯಲ್ಲಿ ಅತಿಯಾದ ನೀರಿನ ಬಳಕೆ ಮಾಡುವುದರಿಂದ ನೀರಿನ ಅಭಾವ ಹೆಚ್ಚಾಗುತ್ತದೆ. ರೋಗ-ರುಜಿನಗಳು ಹರಡು ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಸಮಸ್ಯೆಗಳು ಉಂಟಾಗದಂತೆ ಕ್ರಮ ವಹಿಸಬೇಕಾಗುತ್ತದೆ ಎಂದು ನಿರ್ದೇಶನ ನೀಡಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಅದರಂತೆ ಸಮಸ್ಯೆ ಇರುವ ಗ್ರಾಮಗಳ ಗುರುತಿಸಲು ಹಿಂದಿನ ವರ್ಷದ ಮಾಹಿತಿ ಪರಿಶೀಲನೆ ಮಾಡಬೇಕು. ಕಳೆದ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿದ ಗ್ರಾಮಗಳ ಪಟ್ಟಿ ಸಿದ್ಧಪಡಿಸಬೇಕು. ಕಡಿಮೆ ಮಳೆ ದಾಖಲಾಗಿರುವ ಹೋಬಳಿ/ಗ್ರಾಮವನ್ನು ಗುರುತಿಸಬೇಕು. ನೀರಿನ ಮೂಲಗಳ ಸ್ಥಿತಿ ಹಾಗೂ ಬೋರ್‌ವೆಲ್‌ಗಳ ನೀರಿನ ಮಟ್ಟ ಪರಿಶೀಲನೆ ಮಾಡಬೇಕು. ತೆರೆದ ಬಾವಿ, ಕೆರೆ ಕುಂಟೆ, ಟ್ಯಾಂಕ್‌ಗಳ ನೀರಿನ ಸಂಗ್ರಹ ಮಟ್ಟ ಪರಿಶೀಲನೆ, ಹಾನಿಗೊಳಗಾದ ಪಂಪ್‌ಸೆಟ್, ಮೋಟಾರ್, ಪೈಪ್‌ಲೈನ್‌ಗಳ ಮಾಹಿತಿ ಸಂಗ್ರಹಿಸಬೇಕು. ಈ ನಿಟ್ಟಿನಲ್ಲಿ ಗ್ರಾಮಸಭೆ ಸಮಿತಿ ಸಭೆ ಆಯೋಜಿಸಬೇಕು. ಮಾತ್ರವಲ್ಲದೆ ಸ್ಥಳೀಯರ ಅಭಿಪ್ರಾಯ ಪಡೆದು ಸಮಸ್ಯೆ ಇರುವ ವಾರ್ಡ್/ಜನವಸತಿ ಪ್ರದೇಶ ಗುರುತಿಸಬೇಕು. ವಿಶೇಷವಾಗಿ ಎಸ್‌ಸಿ, ಎಸ್ಟಿ ಕಾಲನಿ, ಹಳ್ಳಿಯ ದೂರದ ಭಾಗಗಳನ್ನು ಪರಿಶೀಲನೆ ಮಾಡಿ ತಕ್ಷಣದ ಕ್ರಮ ಕೈಗೊಳ್ಳಬೇಕು. ಇದಲ್ಲದೆ ಬೋರ್‌ವೆಲ್ ರಿಪೇರಿ ಮತ್ತು ರೀಚಾರ್ಜ್, ಕೆಟ್ಟುಹೋಗಿರುವ ಮೋಟಾರ್/ಪಂಪ್‌ಗಳನ್ನು ಟ್ಯಾಂಕರ್ ಮೂಲಕ ನೀರು ಪೂರೈಕೆ ಅಗತ್ಯವಿದ್ದಲ್ಲಿ ಮಾತ್ರ ಟ್ಯಾಂಕರ್‌ಗಳ ನಿಯೋಜನೆ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಪಂ ಮುಖ್ಯಯೋಜನಾಧಿಕಾರಿ ಧನುಷ್, ಉಪ ಕಾರ್ಯದರ್ಶಿ(ಅಭಿವೃದ್ಧಿ) ಟಿ.ಲಕ್ಷ್ಮೀ, ಮುಖ್ಯಲೆಕ್ಕಾಧಿಕಾರಿ ಶ್ರೀನಿವಾಸ ನಾಯ್ಕ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎನ್.ಜಿ.ಪ್ರಮೋದ್‌ಕುಮಾರ್, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ ಸೇರಿದಂತೆ ಎಲ್ಲ ಉಪ ವಿಭಾಗಗಳ ಕುಡಿಯುವ ನೀರಿನ ಇಲಾಖೆಯ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net