ಸರ್ಕಾರಿ ಶಾಲಾರಂಭ ಹಬ್ಬದಂತಿರಲಿ: ಶಾಸಕ ಪಿ.ರವಿಕುಮಾರ್ ಗಣಿಗ ಸೂಚನೆ

ಮಂಡ್ಯ ನಗರದದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿದರು.
ಮಂಡ್ಯ ನಗರದದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ
ಮಂಡ್ಯ: ಬೇಸಿಗೆ ರಜೆ ಕಳೆದು ಸರ್ಕಾರಿ ಶಾಲೆಗಳ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ದಿನವನ್ನು ಹಬ್ಬದಂತೆ ಆಚರಣೆ ಮಾಡಬೇಕು. ವಿಭಿನ್ನವಾಗಿ ಮಾಡುವ ಮೂರು ಸರ್ಕಾರಿ ಶಾಲೆಗೆ ನಗದು ಬಹುಮಾನ ನೀಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಶಾಲಾರಂಭದ ಸಿದ್ಧತೆ ಹಾಗೂ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಬ್ಬದ ವಾತಾವರಣದಲ್ಲಿ ಪ್ರೀತಿ ಪೂರ್ವಕ ಸ್ವಾಗತ ಕೋರಬೇಕು. ಪ್ರತಿ ಶಾಲೆಯಲ್ಲೂ ಮಕ್ಕಳಿಗೆ ಆತ್ಮೀಯತೆ, ಸಂತೋಷ ಮತ್ತು ಉತ್ಸಾಹ ತುಂಬುವ ರೀತಿಯಲ್ಲಿ ವಿಶೇಷ ಸ್ವಾಗತ ಕಾರ್ಯಕ್ರಮ ಆಯೋಜಿಸುವಂತೆ ಶಿಕ್ಷಕರಿಗೆ ಸೂಚನೆ ನೀಡಿದರು.
ಸರ್ಕಾರಿ ಶಾಲೆಗಳ ಮೇಲಿನ ಜನರ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಅಧಿಕಾರಿಗಳ ಮೇಲಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವಂತೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲಾಗುವುದು. ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂಬುದು ನನ್ನ ಮೊದಲ ಆದ್ಯತೆ. ಖಾಸಗಿ ಶಾಲೆಗಳತ್ತ ಮುಖ ಮಾಡಿ ಪಾಲಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿಯನ್ನು ತಪ್ಪಿಸುವುದು ನಮ್ಮ ಪ್ರಮುಖ ಗುರಿಯಾಗಬೇಕು. ಸರ್ಕಾರಿ ಶಾಲೆಗಳಲ್ಲೇ ಉತ್ತಮ ಶಿಕ್ಷಣ, ಮೂಲ ಸೌಲಭ್ಯಗಳು ಹಾಗೂ ಗುಣಮಟ್ಟದ ಬೋಧನೆ ಲಭ್ಯವಾಗುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ ಶಾಸಕ ರವಿಕುಮಾರ್ ಗಣಿಗ, ಪ್ರತಿ ಗ್ರಾಮದಲ್ಲೂ ಮನೆಮನೆಗೆ ತೆರಳಿ ವಿದ್ಯಾರ್ಥಿಗಳ ದಾಖಲಾತಿ ಅಭಿಯಾನ ನಡೆಸಬೇಕು. ಖಾಸಗಿ ಶಾಲೆಗಳತ್ತ ಮುಖ ಮಾಡಿರುವ ಪಾಲಕರ ಮನವೊಲಿಸಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸುವ ಕಾರ್ಯಕ್ಕೆ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಡಿಡಿಪಿಐ ಲೋಕೇಶ್, ಡಯಟ್ ಪ್ರಾಂಶುಪಾಲ ಯೋಗೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ನಾಗೇಶ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಿಕ್ಕೇಗೌಡ ಸೇರಿದಂತೆ ಕ್ಷೇತ್ರ ಸಂಯೋಜನಾಧಿಕಾರಿಗಳು ಇದ್ದರು.

ಐದು ಲಕ್ಷ ರೂ ಅನುದಾನ
ಶಾಲಾ ಪುನರಾರಂಭವನ್ನು ವಿಭಿನ್ನವಾಗಿ ಆಚರಿಸಿ ಮಕ್ಕಳನ್ನು ಅತ್ಯುತ್ತಮ ರೀತಿಯಲ್ಲಿ ಸ್ವಾಗತಿಸುವ ಮಂಡ್ಯ ವಿಧಾನಸಭಾ ಕ್ಷೇತ್ರದ ಮೂರು ಸರ್ಕಾರಿ ಶಾಲೆಗಳಿಗೆ ತಲಾ 10,000 ನಗದು ಬಹುಮಾನವನ್ನು ವೈಯಕ್ತಿಕವಾಗಿ ನೀಡುವುದಾಗಿ ಶಾಸಕ ರವಿಕುಮಾರ್ ಗಣಿಗ ಸಭೆಯಲ್ಲಿ ಘೋಷಿಸಿದರು. ಅಂತೆಯೇ ಇದರೊಂದಿಗೆ ಕ್ಷೇತ್ರದಲ್ಲಿ ಅತಿ ಹೆಚ್ಚು ವಿದ್ಯಾರ್ಥಿ ದಾಖಲಾತಿ ಮಾಡಿಸಿರುವ ಸರ್ಕಾರಿ ಶಾಲೆಗೆ ವಿಶೇಷವಾಗಿ 5 ಲಕ್ಷ ರೂ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸುವ ಮೂಲಕ ಶಿಕ್ಷಕರು ಮತ್ತು ಅಧಿಕಾರಿಗಳಿಗೆ ಮತ್ತಷ್ಟು ಉತ್ತೇಜನ ನೀಡಿದರು.

1300 ವಿದ್ಯಾರ್ಥಿಗಳಿಗೆ ಪುರಸ್ಕಾರ
ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿರುವ 1300 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದಲ್ಲಿ ಸನ್ಮಾನಿಸಲು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜೂ.9ರಂದು ನಗರದ ಮಂಡ್ಯ ವಿಶ್ವವಿದ್ಯಾನಿಲಯ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಕುರಿತಂತೆ ಸಭೆಯಲ್ಲಿ ಮಾತನಾಡಿದ ಪಿ.ರವಿಕುಮಾರ್ ಗಣಿಗ, ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ಶಿಕ್ಷಣದ ಮೇಲಿನ ಆಸಕ್ತಿ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರಾಜ್ಯದಲ್ಲೇ ಗಮನ ಸೆಳೆಯುವ ರೀತಿಯಲ್ಲಿ ಆಯೋಜನೆಯಾಗುತ್ತಿದ್ದು, ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸುವ ಜತೆಗೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಸಾರ್ವಜನಿಕ ವೇದಿಕೆಯಲ್ಲಿ ಗೌರವಿಸುವ ಮೂಲಕ ಶಿಕ್ಷಣವೇ ಸಮಾಜದ ಶಕ್ತಿ ಎಂಬ ಸಂದೇಶವನ್ನು ಸಾರುವ ಕಾರ್ಯಕ್ಕೆ ಮುಂದಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಎಸ್‌ಎಸ್‌ಎಲ್‌ಸಿಗೆ ಸಂಬಂಧಿಸಿದಂತೆ ದಕ್ಷಿಣ ವಲಯದಲ್ಲಿ 535 ಹಾಗೂ ಉತ್ತರ ವಲಯದಲ್ಲಿ 225 ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದರುವ 540 ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಲಿದೆ. ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net