ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಆಗಮಿಸಿದ ಸಂಜಯ್ ಕುಮಾರ್ ಅವರನ್ನು ಬೆಳತೂರು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಪ್ರೇಮಾ, ರಾಜಣ್ಣ, ಸಾಗರ್, ಮಂಜುನಾಥ್, ಪ್ರಭುಲಿಂಗು ಇದ್ದರು.
ಮದ್ದೂರು: ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನನ್ನು ಗ್ರಾಮಸ್ಥರು, ಸ್ನೇಹಿತರು ಹಾಗೂ ಕುಟುಂಬ ವರ್ಗದವರು ಹೂ ಗೂಚ್ಛ ನೀಡಿ, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಡಗರ ಸಂಭ್ರಮದಿಂದ ಮಂಗಳವಾರ ಅದ್ದೂರಿಯಾಗಿ ಬರ ಮಾಡಿಕೊಂಡರು.
ತಾಲೂಕಿನ ಕೊಪ್ಪ ಹೋಬಳಿಯ ಬೆಳತೂರು ಗ್ರಾಮದ ಪ್ರೇಮರಾಜಣ್ಣ ದಂಪತಿಯ ಹಿರಿಯ ಪುತ್ರ ಸಂಜಯ್ ಕುಮಾರ್, ಜಮ್ಮು ಕಾಶ್ಮೀರದಲ್ಲಿ 13 ವರ್ಷ, ಚೆನ್ನೈ 2 ವರ್ಷ ಹಾಗೂ ಬೆಂಗಳೂರಿನಲ್ಲಿ 2 ವರ್ಷ ಸೇರಿದಂತೆ ಒಟ್ಟು 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು.
ನಿವೃತ್ತ ಯೋಧ ಸಂಜಯ್‌ಕುಮಾರ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬರೂ ದೇಶ ಹಾಗೂ ತಾಯಿ ಸೇವೆ ಮಾಡಬೇಕು. ಸುಮಾರು 17 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿರುವುದು ನನ್ನ ಜೀವನದ ಅತ್ಯಂತ ಸಂತೋಷದ ವಿಷಯವಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು. ದೇಶ ಉಳಿಯಲು ಮತ್ತು ಅಭಿವೃದ್ಧಿ ಹೊಂದುವಲ್ಲಿ ಯುವಕರ ಪಾತ್ರ ಅಪಾರವಾಗಿದೆ. ಪ್ರತಿಯೊಬ್ಬರೂ ದೇಶಪ್ರೇಮ ಬೆಳೆಸಿಕೊಳ್ಳಬೇಕು. ಗ್ರಾಮಸ್ಥರು, ಸ್ನೇಹಿತರು, ಕುಟುಂಬ ವರ್ಗದವರು ತೋರಿಸಿದ ಪ್ರೀತಿ, ವಾತ್ಸಲ್ಯವನ್ನು ಎಂದಿಗೂ ಮರೆಯವುದಿಲ್ಲ ಎಂದು ಭಾವುಕರಾದರು.
ಗ್ರಾಮದ ಮುಖಂಡರಾದ ಸಾಗರ್, ಬಿ.ಜೆ.ಮಂಜುನಾಥ್, ಬಿ.ಎಸ್.ಪ್ರಭುಲಿಂಗು, ಹರ್ಷ, ಶಂಭುಗೌಡ, ಶಿವಾನಂದ, ನವೀನ್, ಕೌಶಿಕ್, ಪ್ರಸನ್ನ, ಮಾಸ್ಟರ್ ರಮೇಶ್, ದೇವರಾಜು, ಪ್ರದೀಪ್, ಸವ್ಯಸಾಚಿ, ವಿನಯ್, ಗಿರೀಶ್ ಇತರರು ಇದ್ದರು.