ಮೇಲುಕೋಟೆಯಲ್ಲಿ ಅದ್ದೂರಿ ಅಶ್ವ ವಾಹನೋತ್ಸವ

ಅವತಾರ ಸ್ಥಳ ಶ್ರೀಪೆರಂಬೂದೂರಿನಲ್ಲಿ ರಾಮಾನುಜರಿಗೆ ಬಂಗಾರದ ಹಂಸ ವಾಹನೋತ್ಸವ ನಡೆಯಿತು.
ಅವತಾರ ಸ್ಥಳ ಶ್ರೀಪೆರಂಬೂದೂರಿನಲ್ಲಿ ರಾಮಾನುಜರಿಗೆ ಬಂಗಾರದ ಹಂಸ ವಾಹನೋತ್ಸವ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ರಾಮಾನುಜಾಚಾರ್ಯರ 1009ನೇ ತಿರುನಕ್ಷತ್ರ ಮಹೋತ್ಸವ
ಮೇಲುಕೋಟೆ: ರಾಮಾನುಜಾಚಾರ್ಯರ 1009ನೇ ತಿರುನಕ್ಷತ್ರ ಮಹೋತ್ಸವದ ಐದನೇ ದಿನದ ಕಾರ್ಯಕ್ರಮದ ಅಂಗವಾಗಿ ಮೇಲುಕೋಟೆ ದೇವಾಲಯದಲ್ಲಿ ರಾಮಾನುಜಾಚಾರ್ಯರಿಗೆ ಶನಿವಾರ ಬೆಳಗ್ಗೆ ಅಶ್ವವಾಹನೋತ್ಸವ ಮತ್ತು ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವ ವೈಭವದಿಂದ ನೆರವೇರಿತು.
ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ಯತಿರಾಜರಿಗೆ ಪ್ರತಿದಿನ ವೈವಿಧ್ಯಮಯ ಅಲಂಕಾರದೊಡನೆ ವಾಹನೋತ್ಸವಗಳು ಮತ್ತು ವಿಶೇಷ ಉತ್ಸವಗಳು ನಡೆಯುತ್ತಿವೆ. ಬೆಳಗ್ಗೆ ದೇವಾಲಯದಲ್ಲಿ ಪೂಜೆ ನೆರವೇರಿದ ನಂತರ ರಾಜಾಲಂಕಾರದಲ್ಲಿ ಕಂಗೊಳಿಸಿದ ಯತಿರಾಜರಿಗೆ ಚತುರ್ವೀದಿಗಳಲ್ಲಿ ವೈಭವದಿಂದ ಉತ್ಸವ ನೆರವೇರಿಸಲಾಗಿದೆ. ಭಾರತದ ದೇವಾಲಯದಲ್ಲೇ ವಿಶಿಷ್ಟವಾದ ದಿವ್ಯಪ್ರಬಂಧಪಾರಾಯಣ ವಿಶೇಷ ಮಂಗಳವಾದ್ಯದೊಂದಿಗೆ ನೆರವೇರಿತು. ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವ ಸಡಗರ ಸಂಭ್ರಮದೊಂದಿಗೆ ನೆರವೇರಿತು.
ಚೆಲುವನಾರಾಯಣಸ್ವಾಮಿಗೆ ಹದಿನೈದು ದಿನಗಳಿಂದ ನಡೆಯುತ್ತಿದ್ದ ಕೋಡೈತಿರುನಾಳ್ ಮಹೋತ್ಸವ ಅಮಾವಾಸ್ಯೆಯ ರಾತ್ರಿ ಸಂಪನ್ನವಾಯಿತು. ದೇವಾಲಯದ ಮಹಡಿಯ ಮೇಲೆ ಆದಿಶೇಷನ ಮೇಲೆ ಕುಳಿತ ಚೆಲುವನಾರಾಯಣಸ್ವಾಮಿಗೆ ರಾಜಗೋಪುರದ ಬಳಿ ವೈಮಾಳಿಗೈ ಕೋಡೈ ತಿರುನಾಳ್ ಉತ್ಸವ ನಡೆದ ನಂತರ ಸರ್ಪನಡಿಗೆಯಲ್ಲಿ ಪಡಿಯೇಟ್ರಂ ಮೆಟ್ಟಿಲು ಹತ್ತುವ ವಿಶೇಷ ಆಚರಣೆಯೊಂದಿಗೆ ವೈಮಾಳಿಗೆ ಕೊಡೈ ತಿರುನಾಳ್ ಮುಕ್ತಾಯವಾಯಿತು. ಸಹಸ್ರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿ ವೈಭವವನ್ನು ಕಣ್ತುಂಬಿಕೊಂಡರು.
ಮತ್ತೊಂದೆಡೆ ರಾಮಾನುಜರ ಅವತಾರ ಸ್ಥಳವಾದ ಶ್ರೀ ಪೆರಂಬೂದೂರಿನಲ್ಲೂ ರಾಮಾನುಜಾಚಾರ್ಯರಿಗೆ ಬಂಗಾರದ ಹಂಸವಾಹನೋತ್ಸವ ವೈಭವದಿಂದ ನೆರವೇರಿತು. ರಾಮಾನುಜರ ಉತ್ಸವಗಳು ಏ.22ರವರೆಗೆ ಎರಡೂ ದೇವಾಲಯಗಳಲ್ಲಿ ವೈಭವದಿಂದ ನಡೆಯಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net