ಮಳವಳ್ಳಿಯಲ್ಲಿ ಅದ್ದೂರಿ ದಸರಾ ಮೆರವಣಿಗೆ!

ಮಳವಳ್ಳಿಯಲ್ಲಿ ಆ.15ರಂದು ನಡೆಯುವ ಬೃಹತ್ ರಕ್ತದಾನ ಶಿಬಿರದ ಹಿನ್ನೆಲೆಯಲ್ಲಿ ಬುಧವಾರ ಟೀಮ್ ಮಳವಳ್ಳಿ ತಂಡದವರು ಪ್ರಚಾರಾರ್ಥ ಆಯೋಜಿಸಿದ್ದ ದಸರಾ ಮೆರವಣಿಗೆಯಲ್ಲಿ ಮಾರ್ವಾಡಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಮಳವಳ್ಳಿಯಲ್ಲಿ ಆ.15ರಂದು ನಡೆಯುವ ಬೃಹತ್ ರಕ್ತದಾನ ಶಿಬಿರದ ಹಿನ್ನೆಲೆಯಲ್ಲಿ ಬುಧವಾರ ಟೀಮ್ ಮಳವಳ್ಳಿ ತಂಡದವರು ಪ್ರಚಾರಾರ್ಥ ಆಯೋಜಿಸಿದ್ದ ದಸರಾ ಮೆರವಣಿಗೆಯಲ್ಲಿ ಮಾರ್ವಾಡಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Published on

ಆ.15ರಂದು ಐತಿಹಾಸಿಕ ರಕ್ತದಾನ ಶಿಬಿರದ ಹಿನ್ನೆಲೆ ಆಯೋಜನೆ

ಪಟ್ಟಣದಲ್ಲಿ ಆ.15ರಂದು ನಡೆಯಲಿರುವ 26 ಗಂಟೆಗಳ ಐತಿಹಾಸಿಕ ರಕ್ತದಾನ ಶಿಬಿರದ ಪ್ರಚಾರಾರ್ಥ ಟೀಮ್ ಮಳವಳ್ಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ, ಮಳವಳ್ಳಿ ಪಟ್ಟಣದಲ್ಲಿ ಅದ್ದೂರಿ ದಸರಾ ಮೆರವಣಿಗೆ ನಡೆಯಿತು.

ತಾಲೂಕು ಪಂಚಾಯಿತಿ ಆವರಣದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಪಟ್ಟಣದ ಜನರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ತಮಟೆ, ಡೊಳ್ಳು, ನಗಾರಿಗಳ ವಾದನದೊಂದಿಗೆ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿತು.
ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿ ರೈತರು ಎತ್ತಿನ ಗಾಡಿಗಳ ಮೂಲಕ ಆಗಮಿಸಿದ್ದರು. ಮಾರ್ವಾಡಿ ವ್ಯಾಪಾರಿಗಳು ರಾಜಸ್ಥಾನದ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ ಗಮನ ಸೆಳೆದರು. ಸಂಪೂರ್ಣ ಸಾವಯವ ಕೃಷಿಕರ ಸಂಘದ ಸದಸ್ಯರು, ಆಟೋ ಚಾಲಕರ ಸಂಘ, ಪೊಲೀಸರು, ವ್ಯಾಪಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ತಿಗಳು, ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕರು ವಿವಿಧ ಸಮುದಾಯದವರು ಕೈಯಲ್ಲಿ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು.
ರಕ್ತದಾನದ ಸಂದೇಶವನ್ನು ಮನೆ ಮನೆಗೆ ತಲುಪಿಸೋಣ, ಮಳವಳ್ಳಿ ಐತಿಹಾಸಿಕ ಸಾಧನೆಯ ಭಾಗವಾಗೋಣ ಎಂಬ ಘೋಷಣೆಗಳನ್ನು ಕೂಗುತ್ತಾ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಿದರು. ರಕ್ತದಾನದ ಮಹತ್ವ ಮತ್ತು 26 ಗಂಟೆಗಳ ನಿರಂತರ ಶಿಬಿರದ ಮಾಹಿತಿಯನ್ನು ಪ್ರಚಾರ ಮಾಡಲಾಯಿತು.
ಟೀಮ್ ಮಳವಳ್ಳಿ ಸಂಘಟಕರು ಮಾತನಾಡಿ, ಆ.15 ರ ಸ್ವಾತಂತ್ರ್ಯ ದಿನದಂದು 26 ಗಂಟೆಗಳ ನಿರಂತರ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಇದು ರಾಜ್ಯದಲ್ಲೇ ದಾಖಲೆಯಾಗಲಿದೆ. ಈ ಮೆರವಣಿಗೆಯ ಉದ್ದೇಶ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಸಂಘ-ಸಂಸ್ಥೆಗಳು ಮುಂದೆ ಬಂದು ರಕ್ತದಾನ ಮಾಡಬೇಕು ಎಂದು ಕೋರಿದರು.
ಮೆರವಣಿಗೆಯು ತಾಲೂಕು ಪಂಚಾಯಿತಿಯಿಂದ ಪ್ರಾರಂಭವಾಗಿ, ಮುಖ್ಯ ಬಜಾರ್ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅನಂತ್‌ರಾಮ್ ವೃತ್ತದ ಬಳಿ ಸಮಾಪನಗೊಂಡಿತು. ದಾರಿಯುದ್ದಕ್ಕೂ ನಾಗರಿಕರು ಮೆರವಣಿಗೆಗೆ ಸ್ವಾಗತ ಕೋರಿದರು.
ಕಾರ್ಯಕ್ರಮದಲ್ಲಿ ಟೀಮ್ ಮಳವಳ್ಳಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನೂರಾರು ನಾಗರಿಕರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net