ಕೃಷಿನ್ನೇ ಉಸಿರಾಗಿಸಿಕೊಂಡ ದಂಪತಿ

ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ರೈತ ಎಂ.ಎನ್. ಯತಿರಾಜ್ ಅವರ ಸಾವಯಕ ಕೃಷಿ ಕಾಫಿ ಗಿಡದ ತೋಟ.
ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ರೈತ ಎಂ.ಎನ್. ಯತಿರಾಜ್ ಅವರ ಸಾವಯಕ ಕೃಷಿ ಕಾಫಿ ಗಿಡದ ತೋಟ.
Published on

ಪ್ರಮುಖ ಮುಖ್ಯಾಂಶಗಳು

  • ಮಾದಾಪುರದಲ್ಲಿ ಯಶಸ್ವಿ ಸಾವಯವ ಬೇಸಾಯ
  • ವಾರ್ಷಿಕ 10 ಲಕ್ಷ ರೂ. ಆದಾಯ
ಕಿಕ್ಕೇರಿ: ಮಂಡ್ಯ ಜಿಲ್ಲೆಯ ಕಿಕ್ಕೇರಿ ಹೋಬಳಿಯ ಗಡಿಭಾಗದ ಮಾದಾಪುರ ಗ್ರಾಮದಲ್ಲಿ ಕೃಷಿ ಕಾಯಕದಲ್ಲಿ ಎಂ.ಎಂ.ಯತಿರಾಜ್-ಪುಷ್ಪಲತಾ ದಂಪತಿ ಯಶಸ್ಸು ಕಂಡಿದ್ದಾರೆ. ತಮ್ಮ 2.5ಎಕರೆ ಭೂಮಿಯನ್ನು ಸಾವಯವ ಕೃಷಿ ಸಂಶೋಧನ ಕೇಂದ್ರದಂತೆ ಪರಿವರ್ತಿಸಿಕೊಂಡಿದ್ದಾರೆ.
ಉತ್ತಮ ಇಳುವರಿ, ಹೆಚ್ಚು ಆದಾಯದ ಮೂಲವಾಗಿ ಭೂಮಿಯನ್ನು ಹದವಾಗಿಕೊಂಡಿದ್ದಾರೆ.
ಇವರ ಕೃಷಿತೋಟದ ಒಳಹೊಕ್ಕರೆ ಸಾಕು ಎಲ್ಲವೂ ಸದೃಶವಾಗಲಿದೆ. ಈ ಕೃಷಿ ದಂಪತಿ ಜೋಡೆತ್ತಿನಂತೆ ಸದ್ದಿಲ್ಲದೆ ಕೆಲಸವನ್ನು ಮಾಡುತ್ತಿರುವುದು ಕೃಷಿ ಕಾಯಕ ಮಾಡುವವರಿಗೆ ಮಾದರಿ ಎನ್ನುವಂತಿದೆ. ಟ್ರಾೃಕ್ಟರ್ ಚಾಲಕ, ಅಂಗಡಿ ವ್ಯಾಪಾರ ಎನ್ನದೆ ವಿವಿಧ ಕೆಲಸ ಮಾಡಿದೆ. ಕೂಲಿಕಾರ್ಮಿಕರ ಕೊರತೆ ದೊಡ್ಡದಾಗಿ ಕಾಡಿತು. ಎಲ್ಲವನ್ನು ಬಿಟ್ಟು ಕೃಷಿಯನ್ನು ನಂಬಿ ಭೂಮಿಯಲ್ಲಿ ಕೃಷಿ ಆರಂಭಿಸಿದೆ. ಆರಂಭದಲ್ಲಿ ಬಲುಕಷ್ಟವಾಯಿತು. ಈಗ ಆರಂಭವೇ ತನ್ನ ಸುಂದರ ಬದುಕಿನ ಆರಂಭವಾಗಿದೆ ಎಂದು ಎಂ.ಎಂ.ಯತಿರಾಜ್ ಹೇಳುತ್ತಾರೆ.
ಬೇಸಾಯ ಮಾಡಿ ದುಡಿದು ಎರಡು ಹೆಣ್ಣು ಮಕ್ಕಳನ್ನು ಓದಿಸಿದೆ. ಮಗಳಾದ ಹರ್ಷಿತಾ ಬಿ.ಇಡಿ ಪದವಿಯಲ್ಲಿ ಚಿನ್ನದ ಪದಕ ಪಡೆದು ರೈತನ ಮಗಳ ಸಾಧನೆ ತೋರಿಸಿಕೊಟ್ಟಿದ್ದಾಳೆ. ಇದಕ್ಕಿಂತ ಏನು ಬೇಕು ರೈತನಿಗೆ ಸಿರಿಸಂಪತ್ತು ಎನ್ನುತ್ತಾರೆ. ವಾರ್ಷಿಕವಾಗಿ ಸುಮಾರು 10 ಲಕ್ಷ ರೂ. ಗಳಿಕೆಗೆ ಮೋಸವಿಲ್ಲ ಎಂದು ಹರ್ಷಪಡುತ್ತಾರೆ.
ನಳನಳಿಸುತ್ತಿರುವ ಫಸಲು: ಯತಿರಾಜ್ ತಮ್ಮ ಕೃಷಿ ಭೂಮಿಯಲ್ಲಿ ಸುಮಾರು 100 ತೆಂಗು, 750 ಅಡಿಕೆ, 200 ಬಾಳೆ, 400 ಪಣಿಯೂರು ಒನ್ ತಳಿಯ ಕಾಳು ಮೆಣಸು, 2000 ಚಂದ್ರಗಿರಿ ಕಾಫಿ, 150 ನಲ್ಯಾಣಿ ಗ್ರೀನ್‌ಗೋಲ್ಡ್ ತಳಿಯ ಏಲಕ್ಕಿ ಗಿಡ ಬೆಳೆಸಿದ್ದಾರೆ. ಮಿಶ್ರತಳಿ ಬೇಸಾಯವಾಗಿ ಹಲಸು, ಮಾವು, ಸಪೋಟಾ, ರಾಮಫಲ, ಹನುಮ ಫಲ, ಲಕ್ಷ್ಮಣಫಲ, ಸೀತಾಫಲ, ಸೇಬು, ಕಿತ್ತಳೆ, ನಿಂಬೆ, ಎರಳಿಕಾಯಿ, ನುಗ್ಗೆ, ಪಪ್ಪಾಯಿ, ಥೈವಾನ್ ಸೀಬೆ, ಶುಂಠಿ, ಡ್ರಾಗ್ಯನ್ ಫ್ರೂಟ್, ಚಕ್ಕೋತಾ, ಲವಂಗ, ವೀಳ್ಯದೆಲೆ, ಚಕ್ಕೆ, ನೇರಳೆಯಂತಹ ಹತ್ತಾರು ಬಗೆಯ ಹಣ್ಣು, ವನೌಷಧಿ, ಸಾಂಬಾರ ಪದಾರ್ಥದ ಬಗೆಬಗೆಯ ಧಾನ್ಯಗಳನ್ನು ತಮ್ಮ ತೋಟದಲ್ಲಿ ಉತ್ತಮವಾಗಿ ಬೆಳೆದಿದ್ದಾರೆ.
ತಾವು ಬದುಕುವ ಜತೆಗೆ ಪ್ರಾಣಿ-ಪಕ್ಷಿಗಳಿಗಾಗಿ ಹಣ್ಣು, ಹಂಪಲು ಗಿಡ ಬೆಳೆದರೆ ಪ್ರಾಣಿ-ಪಕ್ಷಿಗಳಿಗೂ ಆಹಾರವಾಗಲಿದೆ. ಇವುಗಳ ಹಿಕ್ಕೆ ಗೊಬ್ಬರ ಭೂಮಿ ಫಲವತ್ತತೆಗೆ ಬಂಗಾರದಂತೆ ಕೆಲಸ ಮಾಡಲಿದೆ ಎಂದು ಪಕ್ಷಿಗಳಿಗಾಗಿ ವಿವಿಧ ಗಿಡಗಳನ್ನು ಬೆಳೆದು ಪ್ರಾಣಿ, ಪಕ್ಷಿ ಜೀವಸಂಕುಲಕ್ಕೆ ಆಸರೆಯಾಗಿದ್ದಾರೆ. ಭೂಮಿಯೊಳಗೆ ಯಂತ್ರ ಇಳಿಸಿಲ್ಲ. ಕೊಟ್ಟಿಗೆ ಗೊಬ್ಬರ ಮರೆತಿಲ್ಲ. ಇಡೀ ಭೂಮಿಯಲ್ಲಿ ನಾಟಿ ಹಸುಗಳದೆ ಪಾರುಪತ್ಯ. ಈ ಹಸುಗಳ ಉಳುಮೆಯಿಂದ ಭೂಮಿ ಹದವಾಗಲಿದೆ.
ದೇಸಿ ತಲಿ ಹಸು ಸಾಕಣೆ
ಮಲೆನಾಡು ಹಸುಗಳನ್ನು ಸಾಕಿಕೊಂಡಿದ್ದಾರೆ. ಮಿಶ್ರತಳಿ ಹಸು ಸಾಕಾಣಿಕೆ ಆರ್ಥಿಕವಾಗಿ ಸ್ವಲ್ಪ ಸಹಾಯವಾಗಬಹುದು. ಆದರೆ ದೇಸಿ ತಳಿ ಗೋವುಗಳಿಂದ ಇಡೀ ಸಮಾಜದ ಆರೋಗ್ಯವೇ ಸುಸ್ಥಿರವಾಗಲಿದೆ. ಸಾಕಷ್ಟು ನಾಟಿಕೋಳಿ ಸಾಕಿಕೊಂಡಿದ್ದಾರೆ. ಕುರಿ ಸಾಕಾಣಿಕೆಯಿಂದ ಆರ್ಥಿಕ ಹೊರೆ ತಗ್ಗಿಸಿಕೊಂಡಿದ್ದಾರೆ. ಹಸು, ಕೋಳಿ, ಕುರಿಗಳಿಗೆ ಕೃಷಿ ಭೂಮಿಯಲ್ಲಿ ನೈಸರ್ಗಿಕವಾಗಿ ಆಹಾರ ಸಿಗಲಿದೆ. ಇದರಿಂದ ರೋಗಮುಕ್ತವಾಗಿ ಬದುಕುತ್ತಿವೆ. ಇವುಗಳ ಗೊಬ್ಬರ ಭೂಮಿಗೆ ಉತ್ತಮವಾಗಿದ್ದು, ಎರೆಹುಳು ಸಾಕಣೆ ಕೂಡ ಇದೆ. ರಾಸಾಯನಿಕ ಗೊಬ್ಬರ, ಔಷಧ ಸಿಂಪಡಣೆ ಮಾಡದಂತೆ ಎರೆಹುಳುಗಳು ಪಾತ್ರವಹಿಸುತ್ತಿವೆ ಎಂದು ಸಂತಸದಿಂದ ಹೇಳುತ್ತಾರೆ.
ಭೂತಾಯಿಗೆ ಆಸರೆ ಜೀವಾಮೃತ: ಹಸುವಿನಿಂದ ಹಾಲು, ತುಪ್ಪ, ಮೊಸರು, ಮಜ್ಜಿಗೆ ಮನೆಗಾದರೆ, ಹಸು ಸಗಣಿ, ಮಜ್ಜಿಗೆ, ಗಂಜಲ ಭೂಮಿಗೆ ಜೀವಾಮೃತ ತಯಾರಿಕೆಗೆ ದ್ವಿದಳ ಧಾನ್ಯದ ಪುಡಿ ಎಲ್ಲವನ್ನು ಮಿಶ್ರಣ ಮಾಡಿಕೊಂಡು 7ದಿನಗಳವರೆಗೆ ಕೊಳೆಸುತ್ತಾರೆ. ಇದನ್ನು ಹದವಾಗಿ ನೀರಿನೊಂದಿಗೆ ಭೂಮಿಗೆ ನೀಡಿ ಭೂಮಿಯನ್ನು ಸುಗಂಧಮಯವಾಗಿಸಿಕೊಂಡು ರಾಸಾಯನಿಕ ಗೊಬ್ಬರಕ್ಕೆ ಗುಡ್‌ಬೈ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net