ಮದ್ದೂರು ಸಮಗ್ರ ಅಬಿವೃದ್ಧಿಗೆ ಪ್ರಾಮಾಣಿಕ ಯತ್ನ

ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಕೆರೆ ಸೌಂದರೀಕರಣ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿ ಪೂಜೆ ಮಾಡಿದರು. ಸಿ.ಟಿ.ಶಂಕರ್, ಹರೀಶ್‌ಬಾಬು, ಎಸ್.ಎಚ್.ರಾಜೇಂದ್ರ, ಪ್ರೀತಂ, ಸಿದ್ದರಾಜು, ಚಿಕ್ಕೇಗೌಡ, ರವಿ ಇದ್ದರು.
ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಕೆರೆ ಸೌಂದರೀಕರಣ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿ ಪೂಜೆ ಮಾಡಿದರು. ಸಿ.ಟಿ.ಶಂಕರ್, ಹರೀಶ್‌ಬಾಬು, ಎಸ್.ಎಚ್.ರಾಜೇಂದ್ರ, ಪ್ರೀತಂ, ಸಿದ್ದರಾಜು, ಚಿಕ್ಕೇಗೌಡ, ರವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಉದಯ್ ಭರವಸೆ
ಮದ್ದೂರು : ಮುಂದಿನ ತಿಂಗಳು ರಾಜ್ಯದ ಬಜೆಟ್ ಮಂಡನೆ ಮಾಡುತ್ತಿದ್ದು, ಈಗಾಗಲೇ ಕ್ಷೇತ್ರದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವಂತೆ ವಿವಿಧ ಇಲಾಖೆಗಳ ಸಚಿವರಿಗೆ ಮನವಿ ಮಾಡಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಸೋಮನಹಳ್ಳಿ ಗ್ರಾಮದ ಕೆರೆ ಸೌಂದರೀಕರಣ ಕಾಮಗಾರಿಗೆ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಈಗಾಗಲೇ ಸರ್ಕಾರ ತಾಲೂಕಿಗೆ ಸಮಗ್ರ ಅಭಿವೃದ್ಧಿಗೆ 1800 ಕೋಟಿ ರೂ. ಹೆಚ್ಚಿನ ಅನುದಾನ ನೀಡಿದ್ದು ಮತ್ತಷ್ಟು ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಮನವಿ ಮಾಡಿದ್ದೇನೆಂದರು.
ಶಿಂಷಾ ಎಡ ದಂಡೆ ವ್ಯಾಪ್ತಿಯ ಕೆರೆ ಮತ್ತು ನಾಲೆಗಳ ಆಧುನೀಕರಣಕ್ಕೆ 127 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿಗೆ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸೋಮನಹಳ್ಳಿ ಕೆರೆಯನ್ನು ಸೌಂದರೀಕರಣ ಮಾಡಲು 4 ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಲಾಗಿದ್ದು, ಇದರಲ್ಲಿ ಏರಿ ವಿಸ್ತರಣೆ, ವಾಕಿಂಗ್ ಪಾತ್, ಗ್ರಿಲ್ ಹಾಗೂ ವಿದ್ಯುತ್ ಕಂಬಗಳ ನಿರ್ಮಾಣ ಮಾಡಲಾಗುವುದು. ಇದರ ಜತೆಗೆ ಇನ್ನು ಒಂದು ತಿಂಗಳೊಳಗೆ ಹೆಚ್ಚುವರಿಯಾಗಿ 5 ಕೋಟಿ ರೂ. ಅನುದಾನ ತಂದು ಅದರಲ್ಲಿ ಒತ್ತುವರಿ ತೆರವು, ಹೂಳೆತ್ತುವುದು, ತೂಬುಗಳ ನಿರ್ಮಾಣ ಹಾಗೂ ಹೆಚ್ಚುವರಿ ನೀರು ತುಂಬಿಸಲು ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಕೆಸ್ತೂರು ಮತ್ತು ಸೋಮನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಯಾವುದೇ ನೀರಾವರಿ ಯೋಜನೆಗಳಿಲ್ಲ. ಹೀಗಾಗಿ ಶಿಂಷಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸಬೇಕಾಗಿದೆ. ಈ ವ್ಯಾಪ್ತಿಯ ಕೆರೆ ಮತ್ತು ನಾಲೆಗಳು ಸೂಕ್ತ ನಿರ್ವಹಣೆ ಇಲ್ಲದೇ ಸಾಕಷ್ಟು ಶಿಥಿಲಗೊಂಡಿದ್ದು, ಹಾಗಾಗಿ 127 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ಸಭೆಯಲ್ಲಿ ಹಣ ಬಿಡುಗಡೆಗೆ ಒಪ್ಪಿಗೆ ನೀಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ ಎಂದರು.
ಈಗಾಗಲೇ ಸೋಮನಹಳ್ಳಿ ಬಳಿ 220 ಕೆ.ವಿ. ಸಬ್ ಸ್ಟೇಷನ್ ನಿರ್ಮಾಣ ಮಾಡಲು 180 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅಗ್ರಿಮೆಂಟ್ ಕೂಡ ಆಗಿ ಅಂತಿಮ ಘಟ್ಟಕ್ಕೆ ತಲುಪಿದೆ. 
ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಶಿಲಾನ್ಯಾಸ ಮಾಡಲು ಆಹ್ವಾನ ಮಾಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಅದರಲ್ಲಿ ಮುಖ್ಯವಾಗಿ ತಾಲೂಕು ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಸಾಕಷ್ಟು ಒತ್ತಡ ಉಂಟಾಗುತ್ತಿದ್ದು, ಹೀಗಾಗಿ ಮೇಲ್ದರ್ಜೆಗೆರಿಸಲು 30 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತೋಟಗಾರಿಕೆ ಇಲಾಖೆ ಜಾಗದಲ್ಲಿ ಟ್ರಾಮಾ ಕೇರ್ (ಆಸ್ಪತ್ರೆ)ಸೆಂಟರ್ ತೆರೆಯಲು 5 ಎಕರೆ ಜಮೀನನ್ನು ಮೀಸಲಿಡಲಾಗಿದ್ದು, ಸರ್ಕಾರದ ಹಂತದಲ್ಲಿ ಪತ್ರ ವ್ಯವಹಾರ ನಡೆಯುತ್ತಿದೆ ಎಂದು ಹೇಳಿದರು.
ಮದ್ದೂರಿನಲ್ಲಿಯೇ ಡಿವೈಎಸ್ಪಿ ಸಬ್ ಡಿವಿಷನ್ ಕಚೇರಿ ತೆರೆಯಲು ಅಂತಿಮ ಹಂತದಲ್ಲಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಕೈ ತಪ್ಪಿದ್ದು, ಗೃಹ ಸಚಿವರನ್ನು ಭೇಟಿ ಮಾಡಿ ಅನುಮೋದನೆ ಪಡೆಯಲಾಗುವುದು. ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ 9 ಕೋಟಿ ರೂ. ಅನುದಾನ ಬಿಡುಗಡೆಗೆ ಸದನದಲ್ಲೂ ಪ್ರಸ್ತಾಪ ಮಾಡಿದ್ದೆ. ಆದರೆ, ಸಚಿವರು ತಾಲೂಕು ಕ್ರೀಡಾಂಗಣಕ್ಕೆ ಅಷ್ಟೊಂದು ಅನುದಾನ ನೀಡಲು ಸಾಧ್ಯವಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಅಭಿವೃದ್ಧಿ ಮಾಡಲು ಅನುದಾನ ನೀಡುತ್ತಿದ್ದು, ನಗರದ ವ್ಯಾಪ್ತಿಯಲ್ಲಿಯೇ 10 ಎಕರೆ ವಿಸ್ತೀರ್ಣದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣ ಮಾಡಲು ಸರ್ವೇ ಪ್ರಕ್ರಿಯೆ ನಡೆಯುತ್ತಿದ್ದು, ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಭರವಸೆ ನೀಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಟಿ.ಶಂಕರ್ ಮಾತನಾಡಿ, ಕೆ.ಎಂ.ಉದಯ್ ಅವರು ಶಾಸಕರಾದ ಎರಡುವರೆ ವರ್ಷದಲ್ಲಿ ತಾಲೂಕಿನಲ್ಲಿ ಸಮಗ್ರ ಅಭಿವೃದ್ಧಿಗೆ 1800 ಕೋಟಿ ರೂ. ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಮೆಚ್ಚುಗೆಯ ವಿಷಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಟಿ.ಶಂಕರ್, ಮನ್ ಮುಲ್ ನಿರ್ದೇಶಕ ಹರೀಶ್‌ಬಾಬು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಎಚ್.ರಾಜೇಂದ್ರ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪ್ರೀತಂ, ಕೆಡಿಪಿ ಸದಸ್ಯ ಸಿದ್ದರಾಜು ಮುಖಂಡರಾದ ಚಿಕ್ಕೇಗೌಡ, ಕೆ.ಎಂ.ರವಿ, ಸಿಪಾಯಿ ಶ್ರೀನಿವಾಸ್, ಪ್ರವೀಣ್, ಚಂದ್ರು, ಶಂಕರ್, ಅಪ್ಪೇಗೌಡ, ಸುರೇಶ್, ರಮೇಶ್ ಮತ್ತಿತರರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net