

ಮಂಡ್ಯ: ನನ್ನನ್ನು ಮುಟ್ಟಿದರೆ ಕರೊನಾ ವೈರಸ್ ಬರುತ್ತೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿ ಪರಾರಿಯಾಗಿದ್ದ ಯುವಕನನ್ನು ಆತನ ಸ್ನೇಹಿತರೊಟ್ಟಿಗೆ ಗುರುವಾರ ಬಂಧಿಸಲಾಗಿದೆ.
ಕೆ.ಆರ್.ಪೇಟೆ ತಾಲೂಕಿನ ಬಳ್ಳೇಕೆರೆ ಗ್ರಾಮದ ಮಹೇಶ್, ಅಭಿಶೇಕ್ ಹಾಗೂ ಶ್ರೀನಿವಾಸ್ ಬಂಧಿತ ಯುವಕರು. ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಹೇಶ್, ಯುಗಾದಿ ಹಬ್ಬಕ್ಕೆಂದು ಬಳ್ಳೇಕೆರೆಗೆ ಬಂದಿದ್ದ. ಆತನ ಕೈಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೀಲ್ ಹಾಕಿ ಹೋಂ ಕ್ವಾರಂಟೈನ್ನಲ್ಲಿ ಇಟ್ಟಿದ್ದರು.
ಇದರ ನಡುವೆ ಕ್ವಾರಂಟೈನ್ ಉಲ್ಲಂಘಿಸಿ ಮಹೇಶ್ ತನ್ನ ಸ್ನೇಹಿತರೊಂದಿಗೆ ಚಿನಕುರಳಿಗೆ ಹೋಗಿದ್ದ. ನಿನ್ನೆ ರಾತ್ರಿ ವಾಪಸ್ ಬರುವಾಗ ತೆಂಡೇಕೆರೆ ಚೆಕ್ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿ ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಕೈಯಲ್ಲಿ ಸೀಲ್ ಇದ್ದುದ್ದರಿಂದ ನನಗೆ ಕರೊನಾ ಇದೆ. ಮುಟ್ಟಿದರೆ ನಿಮಗೂ ಬರುತ್ತದೆ ಎಂದು ಬೆದರಿಸಿ ಸ್ನೇಹಿತರೊಟ್ಟಿಗೆ ಪರಾರಿಯಾಗಿದ್ದ.
ಇದೀಗ ಪಿಎಸ್ಐ ಬ್ಯಾಟರಾಯಿಗೌಡ ನೇತೃತ್ವದಲ್ಲಿ ಯುವಕರನ್ನು ಬಂಧಿಸಲಾಗಿದೆ. ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)