ಮಂಡ್ಯ ಯೂತ್ ಗ್ರೂಪ್‌ನಿಂದ ಸರಳ ದಸರಾ ಆಚರಣೆ: ಬರ ಪರಿಸ್ಥಿತಿ, ಕಾವೇರಿ ವಿವಾದ ಹಿನ್ನೆಲೆ

Youth Group Dasara mandya
Published on

ಮಂಡ್ಯ: ಹಲವಾರು ವರ್ಷದಿಂದ ವಿಜಯದಶಮಿ ದಿನ ಮಂಡ್ಯ ದಸರಾ ಮೂಲಕ ಹೊಸ ಸಾಂಸ್ಕೃತಿಕ ಪರಂಪರೆಗೆ ನಾಂದಿ ಹಾಡಿದ ಮಂಡ್ಯ ಯೂತ್ ಗ್ರೂಪ್ ಈ ಬಾರಿ ಸರಳವಾಗಿ ದಸರಾ ಆಚರಣೆ ಮಾಡಿತು. ಕಾವೇರಿ ವಿವಾದ ಮತು ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬನ್ನಿಮರಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವುದಕ್ಕಷ್ಟೇ ದಸರಾವನ್ನು ಸೀಮಿತಗೊಳಿಸಲಾಗಿತ್ತು.

ಮಂಗಳವಾರ ನಗರದ ಕಾಳಿಕಾಂಬ ದೇವಸ್ಥಾನದ ಸಮೀಪವಿರುವ ಗಜೇಂದ್ರ ಮೋಕ್ಷ ಕೊಳದ ಬಳಿಯ ಬನ್ನಿಮರದ ಬಳಿ ಸೇರಿದ ಗ್ರೂಪ್‌ನ ಪದಾಧಿಕಾರಿಗಳು, ಬೆಳಗ್ಗೆ 11 ರಿಂದ 11.30ರವರೆಗೆ ಸಲ್ಲುವ ಧನುರ್ ಲಗ್ನದಲ್ಲಿ ಬನ್ನಿಮರಕ್ಕೆ ಪೂಜೆ ಸಲ್ಲಿಸಿದರು. ದಸರಾ ಪ್ರಯುಕ್ತ ಬನ್ನಿಪೂಜೆಗೆ ಆಗಮಿಸಿದ್ದವರಿಗೆ ಸಿಹಿ ವಿತರಿಸಲಾಯಿತು.

ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಮಾತನಾಡಿ, ಬರಗಾಲ ಮತ್ತು ಕಾವೇರಿ ವಿವಾದ ಎದುರಾಗಿರುವ ಕಾರಣದಿಂದ ಅತ್ಯಂತ ಸರಳವಾಗಿ ಈ ಬಾರಿ ದಸರಾ ಆಚರಿಸಲಾಗುತ್ತಿದೆ. ಜನರು ಸಂಕಷ್ಟದಲ್ಲಿರುವಾಗ ಅದ್ಧೂರಿ ದಸರಾ ಆಚರಣೆ ಮಾಡುವುದು ಸರಿಯಲ್ಲ. ಬರ ಪರಿಸ್ಥಿತಿ ದೂರಾಗಿ, ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲೆಂದು ಪ್ರಾರ್ಥಿಸುತ್ತಾ ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಈ ಬಾರಿಯ ದಸರಾ ಅಂತ್ಯಗೊಳಿಸಲಾಗುತ್ತಿದೆ. ಮುಂದಿನ ವರ್ಷ ಜನರಿಗೆ ಎದುರಾಗಿರುವ ಸಂಕಷ್ಟಗಳೆಲ್ಲಾ ದೂರವಾಗಿ, ಉತ್ತಮ ಮಳೆಯಿಂದ ಎಲ್ಲೆಡೆ ಸಮೃದ್ಧಿ ನೆಲೆಸುವಂತಾದರೆ ಅದ್ಧೂರಿಯಾಗಿ ಮಂಡ್ಯ ದಸರಾ ಆಚರಿಸಲಾಗುವುದು ಎಂದು ಹೇಳಿದರು.

ಡಾ.ಯಾಶಿಕಾ, ದರ್ಶನ್, ರಾಜಣ್ಣ, ಮಲ್ಲೇಶ್, ನವೀನ್, ಅಪ್ಪಾಜಪ್ಪ, ನಿಂಗೇಗೌಡ, ಕೃಷ್ಣ ಪ್ರಸಾದ್, ಮಂಜು, ಸೀನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net