

ಮಂಡ್ಯ: ಚಿಕ್ಕ ವಯಸ್ಸಿಗೆ ಪ್ರಾಣ ಕಳೆದುಕೊಂಡಿರುವುದು ನೋವಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಮಾನಿಯ ಆತ್ಮಹತ್ಯೆ ಕುರಿತು ವಿಷಾದ ವ್ಯಕ್ತಪಡಿಸಿದರು.
ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದಲ್ಲಿ ಅಭಿಮಾನಿಯ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಸಿದ್ದರಾಮಯ್ಯ ಅಭಿಮಾನಿ ಮತ್ತು ನನ್ನ ಅಂತ್ಯಕ್ರಿಯೆಗೆ ಅವರು ಬರಬೇಕೆಂದು ಡೆತ್‌ನೋಟ್‌ನಲ್ಲಿ ಬರೆದಿದ್ದರಂತೆ.
ನನಗೆ ಈ ವಿಷಯ ತಿಳಿದ ಮೇಲೆ ಅಂತಿಮ ದರ್ಶನ ಪಡೆಯಲು ಬಂದಿದ್ದೇನೆ. ನನಗೆ ಆತ ಅಷ್ಟೇನು ಪರಿಚಯ ಇರಲಿಲ್ಲ. ಪಾಪ ಆತ ನನಗೆ ಗೊತ್ತಿಲ್ಲದೇ ದೊಡ್ಡ ಅಭಿಮಾನಿಯಾಗಿದ್ದ. ಅಭಿಮಾನಿಯಾಗಲಿ ಆಗದೇ ಇರಲಿ, ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದುಕೊಂಡಿದ್ದರಿಂದ ನಾನು ಬಂದೆ.
ಪಾಪ ಸಾಮಾನ್ಯ ಕುಟುಂಬದಿಂದ ಬಂದಿದ್ದ ವ್ಯಕ್ತಿ ಆತ. ಮನೆಯ ಜವಾಬ್ದಾರಿ ಹೊತ್ತುಕೊಂಡಿದ್ದ ವ್ಯಕ್ತಿ. ಈತನ ಸಾವಿನಿಂದ ಮನೆಯವರಿಗೆ ನಷ್ಟ ಆಗಿದೆ. ಆತನ ತಾಯಿ ಅಣ್ಣನನ್ನು ನಾನು ಮಾತನಾಡಿಸಿದೆ. ಇನ್ನೂ ಚಿಕ್ಕ ವಯಸ್ಸು ಮದುವೆಯಾಗಿಲ್ಲ. ಚಿಕ್ಕ ವಯಸ್ಸಿಗೆ ಪ್ರಾಣ ಕಳೆದುಕೊಂಡಿರುವುದು ನೋವಿನ ಸಂಗತಿ. ಪ್ರಾಣ ಕಳೆದುಕೊಂಡಿರುವುದು ಕುಟುಂಬಕ್ಕೆ ಮಾತ್ರ ಅಲ್ಲ ಸಮಾಜಕ್ಕೂ ನಷ್ಟ. ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರ ಅಲ್ಲ. ಆತ್ಮಹತ್ಯೆ ಮನಸ್ಸು ಮಾಡೋದು ಸರಿಯಾದ ನಿರ್ಧಾರ ಅಲ್ಲ. ಎಷ್ಟೇ ತೊಂದರೆ ಇರಲಿ ಸಮಸ್ಯೆ ಇರಲಿ. ಮನೆಯವರು ಹಾಗೂ ಸ್ನೇಹಿತರ ಜತೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಘಟನೆ ಹಿನ್ನೆಲೆ
ಮಾನಸಿಕವಾಗಿ ನೊಂದು ಹೋಗಿದ್ದ ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದ 25 ವರ್ಷದ ಕೃಷ್ಣ, ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಅಂತ್ಯಕ್ರಿಯೆಗೆ ಬರಬೇಕೆಂದು ನಟ ಯಶ್ ಮತ್ತು ಸಿದ್ದರಾಮಯ್ಯ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದು ಕೃಷ್ಣ ಕೊನೆಯುಸಿರೆಳೆದಿದ್ದಾರೆ. (ದಿಗ್ವಿಜಯ ನ್ಯೂಸ್)