

ಮಂಡ್ಯ: ಜಲ ಶಕ್ತಿ ಅಭಿಯಾನದ ಅಂಗವಾಗಿ ಜಲ ಸಂಚಾಯಿ ಜನ ಭಾಗಿದಾರಿ(ಜೆಎಸ್‌ಜೆಬಿ) ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ ಮುಡಿಗೇರಿದೆ.
ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಮತ್ತು ನೀರಿನ ಸಮಸ್ಯೆ ನಿವಾರಿಸಲು ಕೈಗೊಂಡ ಜಲಶಕ್ತಿ ಅಭಿಯಾನದ ಚಟುವಟಿಕೆಗಳನ್ನು ಯಶಸ್ವಿ ಜತೆಗೆ ಪರಿಣಾಮಕಾರಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಮಂಡ್ಯ ಜಿಲ್ಲಾ ಪಂಚಾಯಿತಿಗೆ ಸಲ್ಲುತ್ತದೆ.
ಏನಿದು ಅಭಿಯಾನ?: ನೀರಿಗಾಗಿ ಒಂದಾಗಿ, ಪ್ರತಿ ಹನಿ ನೀರಿನ್ನು ಸಂರಕ್ಷಿಸಿ ಎಂಬ ಧ್ಯೇಯದೊಂದಿಗೆ ಜಲ ಸಂಚಾಯಿತಿ ಜನ ಭಾಗಿದಾರಿ ಅಭಿಯಾನವು ಅಂತರ್ಜಲ ಮಟ್ಟ ಹೆಚ್ಚಿಸುವುದು. ಮಳೆ ನೀರನ್ನು ಸಂಗ್ರಹಿಸುವುದು. ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಬೆಳೆಸುವುದು, ಹವಾಮಾನ ಸ್ಥಿತಿಗತಿಯನ್ನು ಉತ್ತೇಜಿಸುವುದು ಮತ್ತು ನೀರಿನ ಗುಣಮಟ್ಟವನ್ನು ಸುಧಾರಣೆ ಮಾಡುವ ಗುರಿಯನ್ನು ಹೊಂದಲಾಗಿದೆ. ಇದಕ್ಕೆ ಸ್ಥಳೀಯರು, ಸರ್ಕಾರಿ ಸಂಸ್ಥೆಗಳ ಸಹಕಾರ ಪಡೆಯುವುದರ ಜತೆಗೆ ನೀರಿನ ಸಮಸ್ಯೆಗೆ ಸಮರ್ಥವಾದ ಪರಿಹಾರ ಹುಡುಕುವುದಾಗಿದೆ.
ಅಂತೆಯೇ ಜಲಶಕ್ತಿ ಉದ್ದೇಶ ನೀರಿನ ಕೊರತೆ ನಿವಾರಣೆ ಮಾಡುವುದು, ಮಳೆ ನೀರನ್ನು ಸರಾಗವಾಗಿ ಹರಿಯುವಂತೆ ಮಾಡುವುದು, ವ್ಯರ್ಥವಾಗಿ ಹರಿಯುವ ನೀರನ್ನು ತಡೆಯುವುದು, ಮುಂದುವರೆದು ಆ ತಡೆದ ನೀರನ್ನು ಭೂಮಿಗೆ ಇಂಗುವಂತೆ ಮಾಡುವುದು, ಜಲ ಸಂಪನ್ಮೂಲಗಳ ಸಂರಕ್ಷಣೆ ಜತೆಗೆ ಮರು ಸ್ಥಾಪನೆ ಮಾಡುವುದು, ನಂತರ ಮರು ಬಳಕೆಗೆ ಉತ್ತೇಜಿಸುವುದು, ಅಮೃತ ಸರೋವರಗಳ ರಚನೆ ಮತ್ತು ನವೀಕರಣದ ಮೂಲಕ ನೀರಿನ ಸಂಗ್ರಹಣೆ ಹೆಚ್ಚುವಂತೆ ಮಾಡುವುದು ಜಲಶಕ್ತಿ ಅಭಿಯಾನದ ಬಹುಮುಖ್ಯ ಉದ್ದೇಶವಾಗಿದೆ.
ಜಲ ಸಂಚಾಯಿ ಜನ ಭಾಗಿದಾರಿ ಅಭಿಯಾನದಡಿ ಜಲ ಸಂರಕ್ಷಣೆ ಹಾಗೂ ಮಳೆ ನೀರಿನ ಸಂಗ್ರಹಣೆಯಂತಹ ಚಟುವಟಿಕೆಗಳಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸುವುದಾಗಿದೆ. ಜನರಿಗೆ ನೀರಿನ ಮಹತ್ವ, ನೀರಿನ ಸಂರಕ್ಷಣೆ ವಿಧಾನಗಳ ಬಗ್ಗೆ ಅರಿವು ಮೂಡಿಸುವಲ್ಲಿ ಮಂಡ್ಯ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಇತರೆ ಯೋಜನೆಗಳಡಿ ಜಿಲ್ಲೆಯು 2024ರ ಏ.1 ರಿಂದ 2025ರ ಮಾ.31ರವರೆಗೆ 7,192 ಜಲ ಸಂರಕ್ಷಣೆ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಅಂತೆಯೇ ಜಲ ಸಂಚಾಯ ಫೋರ್ಟಲ್ನಲ್ಲಿ ಅಗತ್ಯ ಮಾಹಿತಿ ದಾಖಲು ಮಾಡಲಾಗಿತ್ತು. ಇದಾದ ನಂತರ ಯೋಜನೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಉಳಿದೆಲ್ಲ ಜಿಲ್ಲೆಗಳಲ್ಲಿಯೂ ಪರಿಶೀಲನೆ ಮಾಡಿದ ನಂತರ ಲಿತಾಂಶ ಶೋಷಣೆ ಮಾಡಲಾಗಿದೆ.
25 ಲಕ್ಷ ರೂ ನಗದು ಬಹುಮಾನ
ಜಲ ಸಂರಕ್ಷಣೆ ಕಾಮಗಾರಿಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಮಂಡ್ಯ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ ಜತೆಗೆ 25 ಲಕ್ಷ ರೂ ಬಹುಮಾನ ಸಿಗಲಿದೆ. ಜಲ ಸಂಚಾಯಿ ಜನ ಭಾಗಿದಾರಿ ಅಭಿಯಾನದಡಿ ರಾಜ್ಯಗಳನ್ನು 5 ವಲಯಗಳಾಗಿ ವಿಂಗಡಿಸಲಾಗಿತ್ತು. 3ನೇ ವಲಯದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿವೆ. ಈ ಪೈಕಿ ಕರ್ನಾಟಕ ರಾಜ್ಯದ 7 ಜಿಲ್ಲೆಗಳಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದೆ. ಅದರಂತೆ ಕೆಟಗರಿ ಮೂರರಲ್ಲಿ ಗದಗ, ಕೋಲಾರ, ಬೀದರ್, ತುಮಕೂರು, ವಿಜಯಪುರ ಹಾಗೂ ಮಂಡ್ಯ ಜಿಲ್ಲೆಗೆ ಪ್ರಶಸ್ತಿ ದೊರೆತಿದೆ. ಅಂತೆಯೇ ಮೈಸೂರು ವಿಭಾಗದ ಜಿಲ್ಲೆಗಳ ಪೈಕಿ ಮಂಡ್ಯ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಒಟ್ಟಾರೆ ಈ ಅಭಿಯಾನದಲ್ಲಿ 13 ರಾಜ್ಯದ 67 ಜಿಲ್ಲೆಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಮಂಡ್ಯ ಕೂಡ ಅರ್ಹತೆ ಪಡೆದಿದೆ. ಈ ಯೋಜನೆಯಲ್ಲಿ 50 ಕೋಟಿ ರೂ ಬಹುಮಾನ ನೀಡಲಾಗುತ್ತಿದೆ. ಕ್ಯಾಟಗರಿ 1ರಲ್ಲಿ ಅರ್ಹತೆ ಪಡೆದ ಜಿಲ್ಲೆಗೆ ತಲಾ 2 ಕೋಟಿ ರೂ, ಕ್ಯಾಟಗರಿ 2ರಲ್ಲಿ ಅರ್ಹತೆ ಪಡೆದ ಜಿಲ್ಲೆಗೆ ತಲಾ 1 ಕೋಟಿ ರೂ ಹಾಗೂ ಕ್ಯಾಟಗರಿ 3ರಲ್ಲಿ ಅರ್ಹತೆ ಪಡೆದ ಜಿಲ್ಲೆಗಳಿಗೆ ತಲಾ 25 ಲಕ್ಷ ರೂಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.
ಜಲ ಸಂಚಾಯಿ ಜನ ಭಾಗಿದಾರಿ ಅಭಿಯಾನದಡಿ ಜಿಲ್ಲೆಯಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳಾದ ಬದು ನಿರ್ಮಾಣ, ಬೋರ್‌ವೆಲ್ ರೀಚಾರ್ಜ್ ಪಿಟ್, ಸೋಕ್ ಪಿಟ್, ಸಮಗ್ರ ಕೆರೆ ಅಭಿವೃದ್ಧಿ, ಕಟ್ಟೆಗಳ ಅಭಿವೃಧ್ಧಿ, ಕಲ್ಯಾಣಿಗಳ ಜೀರ್ಣೋದ್ಧಾರ, ಮಳೆ ನೀರು ಕೊಯ್ಲು, ತೆರೆದ ಬಾವಿ, ನಾಲಾ ಹೊಳೆತ್ತುವುದು, ಚೆಕ್ ಡ್ಯಾಂ ಕಾಮಗಾರಿ ಅನುಷ್ಠಾನಗೊಳಿಸಲಾಗಿತ್ತು. ಅದರಂತೆ ಆ ಕಾಮಗಾರಿಗಳನ್ನು ಕೇಂದ್ರದ ನೋಡಲ್ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೆ.ಆರ್.ನಂದಿನಿ ಜಿಪಂ ಸಿಇಒ