

ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನಗೊಳಿಸಬಾರದು ಎಂದು ಮಂಡ್ಯ ವಿವಿ ಉಳಿಸಿ ಹೋರಾಟ ವೇದಿಕೆ ಸದಸ್ಯ ಬೇಕ್ರಿ ರಮೇಶ್ ಒತ್ತಾಯಿಸಿದರು.
ವಿವಿ ವಿಲೀನಗೊಳಿಸುವ ಸಂಬಂಧ ರಾಜ್ಯಸರ್ಕಾರ ಯಾವುದೇ ಸಕಾರಾತ್ಮಕ ಕಾರಣ ಕೊಡದೇ ಏಕಾಏಕಿ ನಿರ್ಧಾರ ಮಾಡಿರುವುದು ಸರಿಯಲ್ಲ. ಕೇವಲ ಸಮಿತಿ ವರದಿ, ಆರ್ಥಿಕ ಹೊರೆಯ ನೆಪವೊಡ್ಡಿ ವಿವಿಯ ವಿಲೀನಕ್ಕೆ ಮುಂದಾಗಿರುವುದು ಖಂಡನೀಯ. ಮಂಡ್ಯ ವಿವಿ ಶೈಕ್ಷಣಿಕವಾಗಿ ಅತ್ಯಂತ ಪ್ರಬಲವಾಗಿದ್ದು, ಆಡಳಿತಾತ್ಮಕ ವೈಫಲ್ಯವಿದ್ದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಂಡ್ಯ ಜಿಲ್ಲೆಗೆ ತನ್ನದೇ ಆದ ಘನತೆ ಇದೆ. ಆದಾಗ್ಯೂ ವಿವಿ ವಿಲೀನಗೊಳಿಸಲು ಮುಂದಾಗಿರುವುದು ಅಸಹನೀಯ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಮಂತ್ರಿ, ಶಾಸಕರು ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದ ಅವರು, ಮೈಸೂರಿಗೆ ವಿವಿಯೊಂದಿಗೆ ವಿಲೀನವಾದಲ್ಲಿ ಬಡ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾವುದು ಖಚಿತ. ಮಾತ್ರವಲ್ಲದೆ ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಬೀಳಲಿದೆ. ವಿವಿಯನ್ನು ಮಂಡ್ಯದಲ್ಲಿಯೇ ಉಳಿಸಿಕೊಂಡರೆ ಜಿಲ್ಲೆ ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲಿದೆ. ಇಲ್ಲವಾದಲ್ಲಿ ವಿವಿ ಮುಚ್ಚಿಸಿದ ಅಪಕೀರ್ತಿಗೆ ಜಿಲ್ಲೆಯ ಜನಪ್ರತಿನಿಧಿಗಳು ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೇದಿಕೆಯ ಮೋಹನ್ ಚಿಕ್ಕಮಂಡ್ಯ, ಡಿ.ಅಶೋಕ್, ಮೋಹನ್, ಹೆಮ್ಮಿಗೆ ಚಂದ್ರಶೇಖರ್, ಅಚ್ಯುತ್ ಇತರರಿದ್ದರು.