ಮರಿತಿಬ್ಬೇಗೌಡ, ರಮೇಶ ಬಂಡಿಸಿದ್ದೇಗೌಡ ಹೇಳಿಕೆ ಸರಿಯಲ್ಲ: ಮಂಡ್ಯ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸದಸ್ಯ ಬೇಕ್ರಿ ರಮೇಶ್ ಆಕ್ರೋಶ

Mandya University Save Struggle Committee Press Conference Mandya
Published on

ಮಂಡ್ಯ: ಜಿಲ್ಲೆಯ ವಿಶ್ವವಿದ್ಯಾಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನ ಮಾಡುವ ವಿಚಾರಕ್ಕೆ ಪೂರಕವಾಗಿ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿರುವುದು ಸರಿಯಲ್ಲ. ಇಂತಹ ಮಾತು ಅವರಿಗೆ ಬದ್ಧತೆ ಇಲ್ಲವೆನ್ನುವುದನ್ನು ತೋರಿಸುತ್ತಿದೆ ಎಂದು ಮಂಡ್ಯ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸದಸ್ಯ ಬೇಕ್ರಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

ವಿವಿ ಮುಚ್ಚುತ್ತಾರೆನ್ನುವ ಆತಂಕ ಬೇಡ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸದನದಲ್ಲಿ ತಿಳಿಸಿದ್ದಾರೆ. ಆದಾಗ್ಯೂ ಮರಿತಿಬ್ಬೇಗೌಡ ಹಾಗೂ ರಮೇಶ ಬಂಡಿಸಿದ್ದೇಗೌಡ ವಿಲೀನದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ವಿವಿ ಸ್ಥಾಪನೆ ಮಾಡಿದಾಗ ಧ್ವನಿ ಎತ್ತದ ಇವರು ವಿಲೀನಕ್ಕೆ ಮಾತ್ರ ತಮ್ಮ ದನಿಗೂಡಿಸುತ್ತಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಅವರು ಮಾತ್ರ ವಿಲೀನಕ್ಕೆ ವಿರೋಧದ ಧ್ವನಿ ಎತ್ತುವ ಮೂಲಕ ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೈಸೂರು, ಧಾರವಾಡ, ಬೆಂಗಳೂರು, ಮಂಗಳೂರು ವಿವಿಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ವೇತನ ನೀಡಲು ಕಷ್ಟ ಪಡುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹಾಯಕ್ಕೆ ಬರುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದ್ದಾರೆ. ಕಷ್ಟವೆನ್ನುವ ಕಾರಣಕ್ಕೆ ಎಲ್ಲ ವಿಶ್ವವಿದ್ಯಾಲಯಗಳನ್ನು ಮುಚ್ಚುವುದೇ ಪರಿಹಾರವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

ಭಾರತೀಯ ಕಿಸಾನ್ ಸಂಘದ ಪ್ರಾಂತ್ಯ ಅಧ್ಯಕ್ಷ ರಮೇಶ್‌ರಾಜು ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ನೇರವಾಗಿ ತಲುಪುತ್ತಿದ್ದ ಕೃಷಿ ಸಮ್ಮಾನ್ ಯೋಜನೆ ನಿಲ್ಲಿಸಿದ್ದಾರೆ. ಹಾಲಿನ ದರ ಕಡಿತಗೊಳಿಸಿದ್ದಾರೆ. ಇದೀಗ ರೈತರ ಮಕ್ಕಳ ವಿದ್ಯಾಭ್ಯಾಸವನ್ನೂ ಕಸಿಯುವ ಕೆಲಸವಾಗುತ್ತಿದೆ. ಆರ್ಥಿಕ ಸಂಕಷ್ಟವಿದೆ ಎಂದು ವಿವಿ ವಿಲೀನಕ್ಕೆ ಮುಂದಾದ ಸರ್ಕಾರ ಸಾಲದಲ್ಲಿದೆ ಎಂದು ಸರ್ಕಾರ ನಡೆಸುವುದನ್ನು ನಿಲ್ಲಿಸುವರೇ ಎಂದು ಕುಟುಕಿದರು.

ವಿವಿಧ ಸಂಘಟನೆಯ ಹೆಮ್ಮಿಗೆ ಚಂದ್ರಶೇಖರ್, ಅಪ್ಪಾಜಿಗೌಡ, ಅಚ್ಯುತ್, ಆರಾಧ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net