ಮಂಡ್ಯ ವಿವಿಯಲ್ಲಿ ವಸ್ತು ಪ್ರದರ್ಶನ ನಾಳೆ: ನಿರ್ದೇಶಕ ಡಾ.ಎ.ರಘು ಮಾಹಿತಿ

Press Meet
Published on

ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದಲ್ಲಿ ಆ.18ರಂದು ಮೈಸೂರು ವಿಭಾಗ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಂಡ್ಯ ವಿವಿಯ ವಿಜ್ಞಾನ ನಿಕಾಯ ಘಟಕದ ನಿರ್ದೇಶಕ ಡಾ.ಎ.ರಘು ತಿಳಿಸಿದರು.
ಮನುಕುಲಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ವಿಷಯದ ಸ್ಪರ್ಧೆ ನಡೆಯಲಿದೆ. ಈವರೆಗೆ ಮೈಸೂರು ವಿವಿ ವ್ಯಾಪ್ತಿಯ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳ ವಿವಿಧ ಕಾಲೇಜುಗಳಿಂದ 25 ತಂಡ ಹೆಸರು ನೋಂದಣಿ ಮಾಡಿಸಿವೆ. ಅಂತೆಯೇ 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಮುಖ್ಯ ವಿಷಯದ ಭಾಗವಾಗಿ ಐದು ವಿಜ್ಞಾನ ಮಾದರಿಗಳ ಉಪ ಶೀರ್ಷಿಕೆಗಳಡಿ ವಿದ್ಯಾರ್ಥಿಗಳು ಮಾದರಿಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10ಕ್ಕೆ ಪ್ರದರ್ಶನ ಆರಂಭಗೊಳ್ಳಲಿದೆ ಎಂದು ವಿವರಿಸಿದರು.
ಮಧ್ಯಾಹ್ನ 12ರಿಂದ 3.30ರವರೆಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸ್ಪರ್ಧೆಯಲ್ಲಿನ ವಿಜ್ಞಾನದ ಮಾದರಿಗಳ ವೀಕ್ಷಣೆಗೆ ಮುಕ್ತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು. ಇಬ್ಬರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಸಂಜೆ 4ಕ್ಕೆ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಮಂಡ್ಯ ವಿವಿ ಕುಲಸಚಿವ ಡಾ.ನಾಗರಾಜ್ ಜಿ.ಚೊಳ್ಳಿ ಉದ್ಘಾಟಿಸುವರು. ಕುಲಪತಿ ಡಾ.ಪುಟ್ಟರಾಜು ಅಧ್ಯಕ್ಷತೆ ವಹಿಸುವರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಗಿರಿಧರ್‌ರಾವ್, ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಸಿ.ರವಿ, ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್(ಶಿವಪ್ಪ) ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು ಎಂದು ಹೇಳಿದರು.
ಸ್ಪರ್ಧೆಯ ಸಂಚಾಲಕ ಬಿ.ಸಿ.ಕರೀಗೌಡ, ಕಾಲೇಜಿನ ಸಾಂಸ್ಕೃತಿಕ ರಾಯಭಾರಿ ಡಾ.ಯೋಗಾನರಸಿಂಹಾಚಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net