ಮಂಡ್ಯ ವಿವಿ ಮೈಸೂರಿನೊಂದಿಗೆ ವಿಲೀನ?: ಬಿಜೆಪಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಬ್ರೇಕ್

Mandya University merges with Mysore University Mandya
Published on

ಮಂಡ್ಯ: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಮಂಡ್ಯ ವಿಶ್ವವಿದ್ಯಾನಿಲಯವನ್ನು ಮತ್ತೆ ಮೈಸೂರು ವಿವಿಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎನ್ನುವ ಆಘಾತಕಾರಿ ಮಾಹಿತಿ ಹೊರಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮಂಡ್ಯ ವಿರೋಧಿ ನಿಲುವಿನಿಂದ ಹಿಂದೆ ಸರಿಯದಿದ್ದರೆ ಚಳವಳಿ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.

ರಾಜ್ಯಸರ್ಕಾರ ಮಂಡ್ಯ ಜಿಲ್ಲೆಯಲ್ಲಿ ಪ್ರತ್ಯೇಕ ಕೃಷಿ ವಿಶ್ವವಿದ್ಯಾನಿಲಯ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಹರ್ಷ ವ್ಯಕ್ತಪಡಿಸಿದ ಜಿಲ್ಲೆಯ ಜನರು, ಈಗಾಗಲೇ ಅಸ್ಥಿತ್ವದಲ್ಲಿರುವ ಹಾಗೂ ಪ್ರಗತಿಯತ್ತ ಮುನ್ನಡೆಯುತ್ತಿರುವ ಮಂಡ್ಯ ವಿಶ್ವವಿದ್ಯಾನಿಲಯವನ್ನು ಸ್ಥಗಿತಗೊಳಿಸಬೇಕೆನ್ನುವ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಮಹತ್ವದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಮಾತ್ರವಲ್ಲದೆ ಸರ್ಕಾರದ ವಿರುದ್ಧ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಅಭಿಪ್ರಾಯದಂತೆ ಜಿಲ್ಲೆಗೊಂದು ವಿವಿ ಸ್ಥಾಪನೆ ಹಾಗೂ ಸ್ನಾತಕೋತ್ತರ ಪದವಿ ಪ್ರಗತಿಗಾಗಿ ಬಿಜೆಪಿ ಸರ್ಕಾರ ಐದು ವರ್ಷದ ಹಿಂದೆ ಪ್ರತಿ ಜಿಲ್ಲೆಯಲ್ಲಿಯೂ ವಿವಿ ಸ್ಥಾಪಿಸಿತು. ಅದರಂತೆ ಮಂಡ್ಯ ವಿವಿಯಲ್ಲಿ ಒರ್ವ ಕುಲಪತಿ ನಾಲ್ಕು ವರ್ಷದ ಅವಧಿ ಪೂರೈಸಿ ಈಗ ಪ್ರಭಾರ ಕುಲಪತಿಯ ನೇತೃತ್ವದಲ್ಲಿ ಮುಂದುವರೆಯುತ್ತಿದೆ. ಅಂತೆಯೇ ಈಗಾಗಲೇ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿರುವ ಮಂಡ್ಯ ವಿವಿಯನ್ನು ಮೈಸೂರು ವಿವಿಯೊದಿಗೆ ವಿಲೀನಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ. ಇದು ಜಿಲ್ಲೆಯ ಅಸ್ಮಿತೆಯ ಪ್ರಶ್ನೆಯಾಗಿದೆ ಎಂದರು.

ಇನ್ನು ಸ್ಥಾಪನೆಗೊಂಡ ವಿವಿಗೆ 2 ಕೋಟಿ ರೂ ಅನುದಾನ ನೀಡಿ ಉಳಿದ ವೆಚ್ಚವನ್ನು ಸ್ವಯಂ ಪ್ರೇರಿತವಾಗಿ ತುಂಬಿಕೊಂಡಬೇಕೆಂಬ ನಿಯಮಕ್ಕನುಸಾರವಾಗಿ ವಿವಿ ಪ್ರಾರಂಭಗೊಂಡವೆಂದು ಹೇಳಲಾಗುತ್ತಿದೆ. ಆದರೆ ಸರ್ಕಾರದ ಆದೇಶದಂತೆ ಈವರೆಗೂ ವಿವಿಗಳನ್ನು ಸ್ವತಂತ್ರಗೊಳಿಸಿಲ್ಲ. ಮಂಡ್ಯ ವಿವಿಯಲ್ಲಿ ಅಡಕಗೊಂಡಿರುವ ಸರ್ಕಾರ ಸ್ವಾಯತ್ತ ಪದವಿ ಕಾಲೇಜಿನ ಆಡಳಿತ ಮಂಡಳಿಯನ್ನು ಪ್ರತ್ಯೇಕವಾಗಿರಿಸಿ ಅದರ ನೇತೃತ್ವವನ್ನು ಕಾಲೇಜು ಶಿಕ್ಷಣ ಇಲಾಖೆಗೆ ವಹಿಸಿ ಆ ಕಾಲೇಜಿ ಅಧ್ಯಾಪಕರನ್ನು ವಿವಿಯ ತರಗತಿಗೆ ಪಾಠ ಹೇಳುವಂತೆ ವ್ಯವಸ್ಥೆ ಮಾಡಿರುವುದು ಎಷ್ಟು ಸರಿ?. ಇಡೀ ಆವರಣ ಎರಡು ಆಡಳಿತದಲ್ಲಿ ನಡೆಯುತ್ತಿರುವುದು ಸೋಜಿಗದ ಸಂಗತಿ. ಇದಲ್ಲದೆ ವಿವಿ ಆಡಳಿತವನ್ನು ಕುಲಪತಿ ನಡೆಸುತ್ತಿದ್ದರೆ, ಅಲ್ಲಿನ ಬೋಧಕ ಸಿಬ್ಬಂದಿ ಪ್ರಾಂಶುಪಾಲರ ಅಧೀನದಲ್ಲಿರುವುದು ಆಡಳಿತದಲ್ಲಿ ಗೊಂದಲವನ್ನುಂಟು ಮಾಡಿದೆ. ವಿವಿ ಸ್ಥಾಪನೆ ಮಾಡಿದ ಮೇಲೆ ಅದರ ಆಗು-ಹೋಗುಗಳನ್ನು ಕುರಿತು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಈ ನಡುವೆ ಸಾರ್ವಜನಿಕರ ಗಮನಕ್ಕೆ ತರದೇ ಏಕಾಏಕಿ ವಿವಿಯನ್ನೇ ವಿಲೀನಗೊಳಿಸುವ ಪ್ರಕ್ರಿಯೆಗೆ ಮುಂದಾಗುವುದು ಸರಿಯಲ್ಲ. ಈ ಎಲ್ಲ ವಿಷಯದ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡಬೇಕು. ಇಲ್ಲದಿದ್ದರೆ ವಿವಿಗಾಗಿ ಹೋರಾಟದ ಹಾದಿ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಡಾ.ರಾಮಲಿಂಗಯ್ಯ, ಕೆ.ಬೋರಯ್ಯ, ಮಂಜುನಾಥ್, ಡಾ.ಶಂಕರೇಗೌಡ, ಇಂಡುವಾಳು ಚಂದ್ರಶೇಖರ್, ಸ್ವಾಮಿ, ಹುಲ್ಕೆರೆ ಮಹದೇವು, ಕೆ.ಟಿ.ಹನುಮಂತು, ಅನಿಲ್‌ಕುಮಾರ್, ಕಾರಸವಾಡಿ ಮಹದೇವು, ರಮೇಶ್ ಇತರರಿದ್ದರು.

ವಿವಿಯ ಪ್ರಾಮುಖ್ಯತೆ ವಿವರಿಸಿದ ಜೆಪಿ

ವಿಶ್ವವಿದ್ಯಾನಿಲಯದ ಪ್ರಾಮುಖ್ಯತೆ ವಿವರಿಸಿದ ಪ್ರೊ.ಜಯಪ್ರಕಾಶಗೌಡ, 1967ರಲ್ಲಿ ಕೆ.ವಿ.ಶಂಕರಗೌಡ ಅವರು ಸಚಿವರಾಗಿದ್ದಾಗ ಮಂಡ್ಯದ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಸಮಾರಂಭವೊಂದರಲ್ಲಿ ಮಾತನಾಡಿದ್ದರು. ಆ ವೇಳೆ ಮಂಡ್ಯಕ್ಕೆ ಪ್ರತ್ಯೇಕ ವಿವಿ ಬರಬೇಕೆಂದಿದ್ದರು. ಆಗ ನಮಗೆ ಅದರ ಮಹತ್ವ ಗೊತ್ತಿರಲಿಲ್ಲ. ಅಂತೆಯೇ 1993ರಲ್ಲಿ ಮೈಸೂರು ವಿವಿ ಸೆನೆಟ್ ಸದಸ್ಯರಾಗಿದ್ದ ಅನಿಲ್‌ಕುಮಾರ್, ಪ್ರೊ.ಜೆ.ವೀರೇಂದ್ರ, ಡಾ.ಬಿ.ಚಂದ್ರಶೇಖರ್ ಮಂಡ್ಯದಲ್ಲಿ ಪ್ರತ್ಯೇಕ ವಿವಿ ಪ್ರಾರಂಭಿಸುವ ಪ್ರಸ್ತಾಪ ಮಾಡಿದ್ದರು. ಈ ಸಂಬಂಧ ಡಾ.ಜಿ.ಮಾದೇಗೌಡ ಹಾಗೂ ಡಾ.ಎಚ್.ಡಿ.ಚೌಡಯ್ಯ ಹಾಗೂ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಯಿತು. ವಿವಿ ಪ್ರಾರಂಭವಾಗಬೇಕಾದರೆ ಅದಕ್ಕೆ ಮೊದಲು ಪಿಜಿ ಆರಂಭವಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಕೊಮ್ಮೇರಹಳ್ಳಿ ವಿಶ್ವಮಾನವ ಕೇಂದ್ರದಲ್ಲಿ ಪಿಜಿ ಕೇಂದ್ರವೂ ಆರಂಭಿಸಲಾಯಿತು. 1994ರ ಕಸಾಪ ಸಮ್ಮೇಳನದ ನೆನಪಿಗಾಗಿ ತೂಬಿನಕೆರೆ ಸಮೀಪ ವಿವಿಗೆ 99 ಎಕರೆ ಪ್ರದೇಶವನ್ನು 99 ರೂ ಕೊಟ್ಟು ಸರ್ಕಾರದಿಂದ ಬರೆಸಿಕೊಳ್ಳಲಾಗಿತ್ತು. ಆದರೆ ಬಳಿಕ ತೂಬಿನಕೆರೆಯಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭವಾದರೂ ನಿರೀಕ್ಷೆಯಂತೆ ಅಭಿವೃದ್ಧಿ ಕಾಣಲಿಲ್ಲ. ಆದ್ದರಿಂದ ಬಂದಿರುವ ಅವಕಾಶವನ್ನು ಕಳೆದುಕೊಳ್ಳುವುದು ಬೇಡ. ಮಂಡ್ಯ ವಿವಿ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ಬಸ್ ಸೌಲಭ್ಯ ಕಲ್ಪಿಸಲು ಆಗಲ್ವಾ?

ಮಂಡ್ಯ ತಾಲೂಕಿನ ಬಿ.ಹೊಸೂರು ಕಾಲನಿಯಲ್ಲಿರುವ ಮಹಿಳಾ ವಿಶ್ವವಿದ್ಯಾನಿಲಯ ಮುಚ್ಚುವ ಹಂತಕ್ಕೆ ಬಂದಿದೆ. ಕಾರಣ ಸೌಲಭ್ಯ ಒದಗಿಸದಿರುವುದು. ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಬೆಳಗ್ಗೆ ಹಾಗೂ ಸಂಜೆ ಬಸ್ ಸೌಲಭ್ಯ ಕಲ್ಪಿಸುವಂತೆ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪರಿಣಾಮ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ವರ್ಷ ಬಾಗಿಲು ಮುಚ್ಚಲಿದೆ. ಕೇವಲ ಬಸ್ ಸೌಲಭ್ಯ ಕಲ್ಪಿಸಲು ಆಗಲ್ವಾ ಎಂದು ಪ್ರೊ.ಜಯಪ್ರಕಾಶಗೌಡ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net