

ಮಂಡ್ಯ: ರಾಜ್ಯದ ಸರ್ಕಾರಿ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗೆ ಒಳಪಡುವ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಸೇರಿದಂತೆ ಉನ್ನತ ಶಿಕ್ಷಣ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಪಡೆಯುವ ಮಕ್ಕಳ ಕೌಶಲ ವೃದ್ದಿಸಿ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಹಲವು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಂಡ್ಯ ವಿಶ್ವವಿದ್ಯಾನಿಲಯದ 1 ಮತ್ತು 2ನೇ ವರ್ಷದ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣದ ಜತೆ ಕೌಶಲ ವಿಷಯವನ್ನು ಬೋಧಿಸಬೇಕು. ಅದರಂತೆ ಶ್ರದ್ದೆ ಹಾಗೂ ಶ್ರಮವಹಿಸಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಕಾಲೇಜು ಹಂತದಲ್ಲೇ ಉದ್ಯೋಗ ದೊರಕಿಸುವ ಚಿಂತನೆ ರಾಜ್ಯ ಸರ್ಕಾರಕ್ಕಿದೆ. ಈ ನಿಟ್ಟಿನಲ್ಲಿ ಟಯೋಟೋ ಕಿರ್ಲೋಸ್ಕರ್, ಟಾಟಾ, ಇನ್ಫೋಸಿಸ್ ಸೇರಿದಂತೆ ಮತ್ತಿತರರ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ವಿಶ್ವದ ಜಾಗತಿಕ ಸ್ಪರ್ಧೆಗೆ ನಮ್ಮ ಪದವೀಧರರನ್ನು ಸಜ್ಜುಗೊಳಿಸುವುದು ಅನಿವಾರ್ಯ ಹಾಗೂ ಅಗತ್ಯ. ಈ ನಿಟ್ಟಿನಲ್ಲಿ ಕೌಶಲಾಧಾರಿತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವ ಯೋಜನೆಗಳನ್ನು ರಾಜ್ಯಸರ್ಕಾರ ಅನುಷ್ಠಾನಗೊಳಿಸಿದೆ. ಕೈಗಾರಿಕೆ, ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕೌಶಲತೆಯನ್ನು ಶಿಕ್ಷಣದ ಜತೆ ಕಲಿಸುವ ಗುರಿ ಹೊಂದಲಾಗಿದ್ದು, ಭವಿಷ್ಯದ ಉದ್ಯೋಗವನ್ನು ಸೃಷ್ಠಿಸುವ ನಿಟ್ಟಿನಲ್ಲಿ ಆದ್ಯತಾ ವಲಯವಾಗಿ ಕೌಶಲ ಶಿಕ್ಷಣ ನೀಡಿ ಜಾಗತಿಕ ಪ್ರಪಂಚದ ಸ್ಪರ್ಧೆಗೆ ಮಕ್ಕಳನ್ನು ಅಣಿಗೊಳಿಸಲು ಇಂಗ್ಲೀಷ್ ಭಾಷೆಯ ನೈಪುಣ್ಯತೆ ಬಿತ್ತಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ರಾಜ್ಯದ 45 ಸರ್ಕಾರಿ ಕಾಲೇಜುಗಳಲ್ಲಿ ಕೌಶಲಾಧಾರಿತ ಶಿಕ್ಷಣ ನೀಡಲು 1,400 ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದ್ದು, ಅವರಿಗೆ ರಿಲಯನ್ಸ್, ಟಾಟಾ, ಕ್ರೋಮಾ ಔಟ್‌ಲೆಟ್‌ಗಳಲ್ಲಿ ಉದ್ಯೋಗ ಒದಗಿಸುವ ಚಿಂತನೆ ಸಾಗಿದೆ. ಅದರಂತೆ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ 7 ಸಾವಿರ ರೂನಿಂದ 20 ಸಾವಿರ ರೂವರೆಗೆ ಸ್ಟೇ ಫಂಡ್ ನೀಡಿ ಉದ್ಯೋಗದಾತರಾಗಿಸುವ ಗುರಿ ಹೊಂದಲಾಗಿದೆ. ಅಂತೆಯೇ ಸೆಂಟರ್ ಫಾರ್ ಎಕ್ಸಲೆನ್ಸ್ ಯೋಜನೆ ಜಾರಿಗೊಳಿಸಿ ಕೈಗಾರಿಕಾ ಸ್ನೇಹಿ ಪಠ್ಯದ ಬೋಧನೆಗೆ ಉನ್ನತ ಶಿಕ್ಷಣ ಇಲಾಖೆ ಒತ್ತು ನೀಡಿದೆ ಎಂದರು.
ಬ್ರಿಟಿಷ್ ಕೌನ್ಸಿಲ್ ಜತೆಗಿನ ಒಪ್ಪಂದದಿಂದ ಪ್ರತಿವರ್ಷ 13 ವಿದ್ಯಾರ್ಥಿಗಳನ್ನು ಲಂಡನ್‌ನ ದಂಡಿ ವಿಶ್ವವಿದ್ಯಾನಿಲಯದ ಅಧ್ಯಯನ ಪ್ರವಾಸಕ್ಕೆ ಅನುವು ಮಾಡಲಾಗಿದೆ. ಉಪನ್ಯಾಸಕರು, ಪ್ರಾಧ್ಯಾಪಕರಿಗೆ ತರಬೇತಿಯೂ ದೊರೆಯುತ್ತಿದೆ. ನವೆಂಬರ್ ತಿಂಗಳಲ್ಲಿ 30 ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಿ ಬುದ್ದಿಮತ್ತೆ ವೃದ್ದಿಸುವ ಮತ್ತು ಬ್ರಿಟಿಷ್ ಗ್ರಂಥಾಲಯದ ಮಾಹಿತಿ ಪಡೆಯುವ ಡಿಜಿಟಲ್ ಲೈಬ್ರರಿ ಯೋಜನೆಗೆ ಸರ್ಕಾರ ನೆರವು ನೀಡಿದ್ದು, ಜಾಗತಿಕ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಭವಿಷ್ಯದ ಹೆಜ್ಜೆಯಲ್ಲಿ ಎದುರಾಗುವ ಆತಂಕದಿಂದ ಧೃತಿಗೆಡದೇ ನಿರಂತರ ಪ್ರಯತ್ನ, ಶ್ರಮವಹಿಸಿ ಯಶಸ್ಸುಗೊಳಿಸಲು ಸಜ್ಜುಗೊಳಿಸಲಾಗುವುದು ಎಂದು ವಿವರಿಸಿದರು.
ಅಂತೆಯೇ ನೂತನ ವಿಶ್ವವಿದ್ಯಾನಿಲಯ ಆರಂಭದ ವರ್ಷಗಳಲ್ಲಿ ಎದುರಾಗುವ ಸಂಕಷ್ಟಗಳ ಕ್ಲಿಷ್ಟ ಸ್ಥಿತಿಯಲ್ಲೂ ಶಕ್ತಿಮೀರಿ ಮಂಡ್ಯ ವಿಶ್ವವಿದ್ಯಾನಿಲಯ ಅಭಿವೃದ್ದಿಗೆ ಶ್ರಮಿಸುತ್ತಿರುವ ಕುಲಪತಿ ಡಾ.ಪುಟ್ಟರಾಜು ಕಾರ್ಯವೈಖರಿಯನ್ನು ಉನ್ನತ ಶಿಕ್ಷಣ ಸಚಿವರು ಪ್ರಶಂಸಿಸಿದರು.
ವಿಧಾನ ಪರಿಷತ್ ಸದಸ್ಯರೂ ಆದ ವಿವಿ ವಿದ್ಯಾವಿಷಯಕ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ್, ಮಂಡ್ಯ ವಿವಿ ಕುಲಪತಿ ಪ್ರೊ.ಪುಟ್ಟರಾಜು, ಕುಲ ಸಚಿವ(ಮೌಲ್ಯಮಾಪನ) ಪ್ರೊ.ಕೆ.ಯೋಗನರಸಿಂಹಾಚಾರಿ, ಕುಲಸಚಿವ(ಪ್ರಭಾರ) ಡಾ.ಎಸ್.ಎಲ್.ಸುರೇಶ್ ಇತರರಿದ್ದರು. ಇದೇ ವೇಳೆ ಮದ್ದೂರು ತಾಲೂಕು ಕೊಪ್ಪ ಗ್ರಾಮದ ಪದ್ಮಶ್ರೀ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಅವರಿಗೆ ಎರಡನೇ ವರ್ಷದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.