ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಕೈಜೋಡಿಸಿ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಕರೆ

Mandya University 3rd Convocation Mandya
Published on

ಮಂಡ್ಯ: ಒಂದೇ ಭಾರತ, ಶ್ರೇಷ್ಟ ಭಾರತ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಎಲ್ಲರೂ ಕೈಜೋಡಿಸಿ. ಮೇಡ್ ಇನ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಗುರಿಗಳನ್ನು ಸಾಧಿಸಲು ಕೊಡುಗೆ ನೀಡಿ. ಈ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಕರೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಂಡ್ಯ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಜಗತ್ತು ವೇಗವಾಗಿ ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆ, ಡೇಟಾ ವಿಜ್ಞಾನ, ಸುಸ್ಥಿರ ಅಭಿವೃದ್ಧಿ ಮತ್ತು ಉದ್ಯಮಶೀಲತೆಯಂತಹ ಕ್ಷೇತ್ರಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತಿವೆ. ಆದ್ದರಿಂದ ಯಾವಾಗಲೂ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಆಲೋಚನೆಗಳೊಂದಿಗೆ ನಿಮ್ಮನ್ನು ನವೀಕರಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾಚೀನ ಕಾಲದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ವಿಜ್ಞಾನಗಳ ಕೊಡುಗೆ ಮಹತ್ವದ್ದು. ಭಾರತವು ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿತ್ತು. ಮಾತ್ರವಲ್ಲದೆ ಆರ್ಥಿಕವಾಗಿ ಸಮೃದ್ಧವಾಗಿತ್ತು ಎಂಬ ಕಾರಣಕ್ಕಾಗಿ ವಿಶ್ವ ಗುರು ಎಂದು ಕರೆಯಲಾಗುತ್ತಿತ್ತು. ಭಾರತೀಯ ಖಗೋಳಶಾಸ್ತ್ರದ ಬೇರುಗಳು ವೇದಗಳಲ್ಲಿ ಕಂಡುಬರುತ್ತವೆ. ಖಗೋಳಶಾಸ್ತ್ರದಿಂದ ಭೂವಿಜ್ಞಾನ, ಗಣಿತ, ವೈದ್ಯಕೀಯ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಭಾರತೀಯರು ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ಜೀವನದ ಯಶಸ್ಸಿನಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣವು ಜೀವನದ ಪ್ರತಿ ಕ್ಷೇತ್ರದಲ್ಲೂ ಉಪಯುಕ್ತವಾಗಿದೆ. ಕೌಶಲಗಳನ್ನು ಹೆಚ್ಚಿಸುತ್ತದೆ. ನಾವು ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಕೌಶಲಪೂರ್ಣರಾಗುವ ಮೂಲಕ ನಾವು ಉತ್ತಮ ಯಶಸ್ಸನ್ನು ಸಾಧಿಸಬಹುದು. ನಿಮ್ಮ ಶಿಕ್ಷಣದ ಜ್ಞಾನವನ್ನು ಯಾರು ಕದಿಯಲು ಸಾಧ್ಯವಿಲ್ಲ. ಜೀವನ ಪೂರ್ತಿ ಕಲಿಕೆ ನಿರಂತರವಾಗಿರಲಿ. ಇದು ನಿಮ್ಮ ಯಶಸ್ಸಿಗೆ ಹಾದಿಯಾಗಲಿದೆ. ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯದಂತಹ ಜಾಗತಿಕ ಸವಾಲುಗಳು ಹೆಚ್ಚಾಗುತ್ತಿವೆ. ಈ ಜಾಗತಿಕ ಸವಾಲುಗಳ ಪರಿಹಾರಕ್ಕೆ ಕೊಡುಗೆ ನೀಡಬೇಕು ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಮುಂದಾಗಬೇಕು ಎಂದು ಹೇಳಿದರು.

ಘಟಿಕೋತ್ಸವ ಭಾಷಣ ಮಾಡಿದ ಕೋಲ್ಕತ್ತಾದ ಎನ್‌ಎಸ್‌ಎಚ್‌ಎಂ ಜ್ಞಾನ ಕ್ಯಾಂಪಸ್‌ನ ನಿರ್ದೇಶಕ ಪ್ರೊ.ಸೌಮೇಂದ್ರನಾಥ್ ಬಂಡೋಪಾಧ್ಯಾಯ, ವಿದ್ಯಾರ್ಥಿಗಳ ಸಾಧನೆಯ ಹಿಂದೆ ಬೋಧಕರ ಬದ್ಧತೆ ಮತ್ತು ಪಾಲಕರ ಪರಿಶ್ರಮ ಇದೆ ಎಂಬುದನ್ನು ಮರೆಯಬೇಡಿ. ಉನ್ನತ ವಿವಿಗಳ ಜತೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಮಂಡ್ಯ ವಿವಿ ಮತ್ತಷ್ಟು ಪ್ರಗತಿ ಸಾಧಿಸಲು ಎಂದು ಹಾರೈಸುತ್ತೇನೆ. ನೀವು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದರೆ, ನೀವು ಓದಿದಿ ವಿವಿಗೆ ಕೀರ್ತಿ ಬರುತ್ತದೆ ಎಂದು ಹೇಳಿದರು.

ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಮಾತನಾಡಿ, ಮಂಡ್ಯ ವಿವಿ ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣವಾಗಿದೆ. ಪ್ರಸಕ್ತ ವರ್ಷದಿಂದ ಎಂಬಿಎ, ಎಂಸಿಎ ಕೋರ್ಸ್ ಆರಂಭಿಸಲು ಚಿಂತನೆ ನಡೆದಿದೆ. ಹಲವಾರು ವಿವಿಗಳೊಂದಿಗೆ ಒಪ್ಪಂದ ಮಾಡಿಕೊಂಡು ವಿವಿಯ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಿಸಿಎನಲ್ಲಿ ಕ್ಲೌಡ್ ಕಂಪ್ಯೂಟಿಂಗ್, ಕೃತಿಕ ಬುದ್ಧಿಮತ್ತೆಯನ್ನು ಪರಿಚಯಿಸಿರುವ ಹೆಗ್ಗಳಿಕೆ ನಮ್ಮದು ಎಂದರು.

ಮಂಡ್ಯ ವಿವಿಯ ಕುಲಸಚಿವೆ ಬಿ.ಎನ್.ವೀಣಾ, ಪ್ರೊ.ಕೆ.ಯೋಗನರಸಿಂಹಾಚಾರಿ, ಸಿಂಡಿಕೇಟ್ ಸದಸ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.

ಡಾಕ್ಟರೇಟ್ ಪದವಿ ಪ್ರದಾನ

ಮಂಡ್ಯ ವಿವಿಯ 3ನೇ ಘಟಿಕೋತ್ಸವ ಸಮಾರಂಭದಲ್ಲಿ ಇಬ್ಬರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು. ಶಿಕ್ಷಣ ಮತ್ತು ಸಾಹಿತ್ಯ ಸಾಧನೆಗಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮತ್ತು ಬೀದಿನಾಯಿಗಳ ಸಂರಕ್ಷಣೆ ಹಾಗೂ ದುಶ್ಚಟಗಳ ಕುರಿತು ಜಾಗೃತಿಗಾಗಿ ಡಾ.ಎಚ್.ಎಚ್.ನಿಷ್ಕಲಗೌಡ ಅವರಿಗೆ ಪದವಿ ಪ್ರದಾನ ಮಾಡಲಾಯಿತು. ಯುವ ಉದ್ಯಮಿ ಪ್ರತಾಪ್ ಮಧುಕರ್ ಕಾಮತ್ ಅವರು ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ಬಂದಿರಲಿಲ್ಲ. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಕಾರ್ಯಕ್ರಮಕ್ಕೆ ಗೈರಾದರು.

ಸ್ನಾತಕದಲ್ಲಿ 50, ಸ್ನಾತಕೋತ್ತರದಲ್ಲಿ 27 ಸೇರಿದಂತೆ ಒಟ್ಟು 77 ರ‌್ಯಾಂಕ್ ವಿಜೇತರು ಸೇರಿದಂತೆ ಒಟ್ಟು 815 ಪದವೀಧರರಿಗೆ ಪ್ರಮಾಣ ಪತ್ರವನ್ನು ಗಣ್ಯರು ಪ್ರದಾನ ಮಾಡಿದರು. ಈ ಪೈಕಿ 455 ಮಹಿಳೆಯರು ಮತ್ತು 360 ಪುರುಷ ಪದವೀಧರರು ಇದ್ದರು. ಸ್ನಾತಕೋತ್ತರ ವಿಭಾಗದ ಎಂ.ಕಾಂ ನಲ್ಲಿ ಗರಿಷ್ಟ 8 ವಿದ್ಯಾರ್ಥಿಗಳು ರ‌್ಯಾಂಕ್ ಪಡೆದರು. ಸ್ನಾತಕ ವಿಭಾಗದಿಂದ 16, ಸ್ನಾತಕೋತ್ತರ ವಿಭಾಗದಿಂದ 18 ಸೇರಿದಂತೆ ಒಟ್ಟು 34 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ದತ್ತಿ ಬಹುಮಾನ ಪ್ರದಾನ ಮಾಡಲಾಯಿತು.

Mandya University 3rd Convocation
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net