ಟ್ರೋಫಿಗೆ ಮುತ್ತಿಟ್ಟ ಮಂಡ್ಯ ತಂಡ

FotoJet
Published on

ದೊಡ್ಡಬಳ್ಳಾಪುರ: ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮಂಡ್ಯ ಜಿಲ್ಲಾ ತಂಡ ಚಾಂಪಿಯನ್ ಪಟ್ಟ ಗಳಿಸಿ ಟ್ರೋಫಿಗೆ ಮುತ್ತಿಟ್ಟಿತು. ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರೆ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದವು.

ಶಾಸಕ ಧೀರಜ್ ಮುನಿರಾಜು ಜನ್ಮದಿನದ ಪ್ರಯುಕ್ತ ನಗರದ ಖಾಸ್ ಬಾಗ್ - ದರ್ಗಾಪುರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಹೊನಲು ಬೆಳಕಿನ ರಾಜ್ಯ ಮಟ್ಟದ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್-2025 ( ಅಂಜನಾದ್ರಿ ಕಪ್ -2025) ಪಂದ್ಯಾವಳಿಯಲ್ಲಿ ಮೂರನೇ ದಿನವಾದ ಬುಧವಾರ ಸಂಜೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾವಳಿಗಳು ನಡೆದವು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಶರತ್ ಆರ್.ಅಶೋಕ್, ನಮ್ಮ ನೆಲದ ದೇಸಿ ಕ್ರೀಡೆಗೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿರುವ ದೊಡ್ಡಬಳ್ಳಾಪುರ ಜನತೆಗೆ ಮಾದರಿ ಎನಿಸಿದ್ದಾರೆ, ಕ್ರೀಡೆಯು ಜೀವನದಲ್ಲಿ ಮಹತ್ವದ ಸಾಧನೆಗೆ ಮೈಲಿಗಲ್ಲು, ಯುವ ಜನತೆ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವರ್ಷದ ಒಳಗೆ ಆತ್ಯಾಧುನಿಕ ಕಬಡ್ಡಿ ಕ್ರೀಡಾಂಗಣ ನಿರ್ಮಾಣ

ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್‌ಗೆ ಒಳಾಂಗಣ ಕ್ರೀಡಾಂಗಣಕ್ಕಾಗಿ ಸರ್ಕಾರ ನಿವೇಶನ ಮಂಜೂರು ಮಾಡಿದೆ. ಆದರೆ ಉತ್ತಮ ಸೌಲಭ್ಯವುಳ್ಳ ಮ್ಯಾಟ್ ಕ್ರೀಡಾಂಗಣ ನಿರ್ಮಾಣಕ್ಕೆ ಶಾಸಕರು ಕ್ರಮ ಜರುಗಿಸಬೇಕು ಎಂದು ಅರ್ಜನ ಪ್ರಶಸ್ತಿ ಪುರಸ್ಕೃತ ಬಿ.ಸಿ.ರಮೇಶ್ ಮನವಿ ಮಾಡಿದರು. ದೊಡ್ಡಬಳ್ಳಾಪುರದಲ್ಲಿ ಕಬಡ್ಡಿಗೆ ಹೆಚ್ಚಿನ ಕ್ರೀಡಾಪ್ರೇಮಿಗಳಿದ್ದಾರೆ, ಅಂತಾರಾಷ್ಟ್ರೀಯ, ರಾಷ್ಟ್ರ, ರಾಜ್ಯ ಕ್ರೀಡಾಪಟುಗಳು ಮಿಂಚಿದ್ದಾರೆ. ಮುಂದಿನ ಪಿಳೀಗೆಯ ಕಬಡ್ಡಿ ಕ್ರೀಡಾಪಟುಗಳಿಗಾಗಿ ಉತ್ತಮ ಕ್ರೀಡಾಂಗಣ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾತನಾಡಿ ಒಂದು ವರ್ಷದ ಒಳಗಾಗಿ ಆತ್ಯಾಧುನಿಕ ಕಬಡ್ಡಿ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಧೀರಜ್ ಮುನಿರಾಜು ಭರವಸೆ ನೀಡಿದರು.

ವಿಜೇತ ತಂಡಗಳಿಗೆ ಬಹುಮಾನ, ಟ್ರೋಫಿ

ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಮಂಡ್ಯ ತಂಡಕ್ಕೆ 1,11,111 ರೂಪಾಯಿ ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ದಕ್ಷಿಣ ಕನ್ನಡ ತಂಡಕ್ಕೆ 77,777 ರೂ. ನಗದು, ಟ್ರೋಫಿ ಮತ್ತು ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆದ ಚಿಕ್ಕಮಗಳೂರು, ಉತ್ತರಕನ್ನಡ ತಂಡಕ್ಕೆ 33,333 ರೂ.ನಗದು ಮತ್ತು ಟ್ರೋಫಿಗಳನ್ನು ಬಹುಮಾನವಾಗಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net