

ಮಂಡ್ಯ: ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಶೇ.73.27ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 14ನೇ ಸ್ಥಾನ ಪಡೆದಿದೆ. ಇದರೊಂದಿಗೆ ಕಳೆದ ಸಾಲಿನಲ್ಲಿ 24ನೇ ಸ್ಥಾನದಲ್ಲಿದ್ದ ಜಿಲ್ಲೆ ಹತ್ತು ಸ್ಥಾನ ಮೇಲಕ್ಕೇರಿದಂತಾಗಿದೆ.
ಜಿಲ್ಲೆಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಸೇರಿ ಒಟ್ಟು 12,763 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 9,351 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 73.27ರಷ್ಟು ಫಲಿತಾಂಶ ಬಂದಿದೆ. ಈ ಬಾರಿಯೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಖಾಸಗಿ, ಪುನಾರಾವರ್ತಿತ ಸೇರಿದಂತೆ ಪರೀಕ್ಷೆ ಬರೆದಿದ್ದ 7,911 ವಿದ್ಯಾರ್ಥಿನಿಯರಲ್ಲಿ 5,798 (ಶೇ.73.29) ಹಾಗೂ 5,987 ಗಂಡು ಮಕ್ಕಳಲ್ಲಿ 3,749 (ಶೇ.62.62) ಜನರು ತೇರ್ಗಡೆ ಹೊಂದಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗಿಂತ (ಶೇ.80.53) ನಗರ ಪ್ರದೇಶದ ವಿದ್ಯಾರ್ಥಿಗಳು (ಶೇ.86.78) ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿ ಗಮನ ಸೆಳೆದಿದ್ದಾರೆ. ಅಂತೆಯೇ ಈ ವರ್ಷ 310 ಖಾಸಗಿ ಹಾಗೂ 825 ಜನ ಪುನರಾವರ್ತಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 13,898 ಜನರು ಪರೀಕ್ಷೆ ತೆಗೆದುಕೊಂಡಿದ್ದರು. ಇವರಲ್ಲಿ 9,547(ಶೇ.68.69) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಆದರೆ, ಹೊಸ ವಿದ್ಯಾರ್ಥಿಗಳ ಉತ್ತೀರ್ಣತೆಯನ್ನು ಮಾತ್ರ ಶೈಕ್ಷಣಿಕ ಸಾಧನೆಯಲ್ಲಿ ಪರಿಗಣಿಸಲಾಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಈ ವರ್ಷ ಹೊಸದಾಗಿ ಪರೀಕ್ಷೆ ಬರೆದಿದ್ದ 12,763 ಹೊಸ ವಿದ್ಯಾರ್ಥಿಗಳಲ್ಲಿ 9,351 (ಶೇ.73.27) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇನ್ನು ವಿಜ್ಞಾನ ವಿಭಾಗದಲ್ಲಿ 6,450 ವಿದ್ಯಾರ್ಥಿಗಳಲ್ಲಿ 5,480 ವಿದ್ಯಾರ್ಥಿಗಳು(ಶೇ.84.96), ಕಲಾ ವಿಭಾಗದಲ್ಲಿ 2,173 ವಿದ್ಯಾರ್ಥಿಗಳಲ್ಲಿ 1,065 ವಿದ್ಯಾರ್ಥಿಗಳು (ಶೇ. 49.01) ಹಾಗೂ ವಾಣಿಜ್ಯ ವಿಭಾಗದಲ್ಲಿ 4,140 ವಿದ್ಯಾರ್ಥಿಗಳಲ್ಲಿ 2,806 ವಿದ್ಯಾರ್ಥಿಗಳು(ಶೇ. 67.78) ಉತ್ತೀರ್ಣರಾಗಿದ್ದಾರೆ.