

ಮಂಡ್ಯ: ರಾಜ್ಯದ ಮೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಪೈಕಿ ಚನ್ನಪಟ್ಟಣ ಹೈವೋಲ್ಟೇಜ್ ಕಣವಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯದ ರಾಜಕಾರಣ ಕೂಡ ಬೊಂಬೆನಾಡಿಗೆ ಶಿಫ್ಟ್ ಆಗಿದೆ.
ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭೆ ಸೋಲಿನ ಬಳಿಕ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿರುವ ನಿಖಿಲ್ ಕುಮಾರಸ್ವಾಮಿ ಪರ ಮತಯಾಚಿಸಲು ಜಿಲ್ಲೆಯ ದಳಪತಿಗಳು ಚನ್ನಪಟ್ಟಣದತ್ತ ಮುಖ ಮಾಡಿದ್ದಾರೆ. ಅತ್ತ ರಾಜ್ಯಸರ್ಕಾರದ ಪ್ರತಿಷ್ಠೆ ಕಾಪಾಡಿಕೊಳ್ಳುವುದರ ಜತೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಸೋಲಿನ ರುಚಿ ತೋರಿಸಲು ಜಿಲ್ಲೆಯ ಕಾಂಗ್ರೆಸ್ ನಾಯಕರು ಕೂಡ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪರ ಟೊಂಕ ಕಟ್ಟಿ ನಿಂತಿದ್ದಾರೆ.
ಸಿಪಿವೈ ‘ಕೈ’ ಹಿಡಿಸಿದ್ದು ಜಿಲ್ಲೆಯವರೇ: ಬಿಜೆಪಿಯಿಂದ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದ ಸಿ.ಪಿ.ಯೋಗೇಶ್ವರ್ ಕೊನೆ ಹಂತದಲ್ಲಿ ಕಾಂಗ್ರೆಸ್ ತೆಕ್ಕೆ ಸೇರಿಸಿಕೊಳ್ಳುವುದರ ಜತೆಗೆ ಅಖಾಡದಲ್ಲಿ ಹುರಿಯಾಳಾಗಿದ್ದಾರೆ. ಆದರೆ ಸಿಪಿವೈ ಕಾಂಗ್ರೆಸ್ ಸೇರ್ಪಡೆಯಾಗಲು ಮಂಡ್ಯ ಜಿಲ್ಲೆಯ ನಾಯಕರೇ ಕಾರಣ ಎನ್ನುವ ಮಾತಿದೆ. ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ಮದ್ದೂರು ಶಾಸಕ ಕೆ.ಎಂ.ಉದಯ್ ಈ ಬಗ್ಗೆ ಮಾತನಾಡಿದ್ದು, ಹೈಕಮಾಂಡ್ ಸೂಚನೆಯಂತೆ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆದುಕೊಂಡು ಬರಲಾಗಿದೆ ಎಂದಿದ್ದರು. ಹಾಗೆ ನೋಡಿದರೆ ಉದಯ್ ಹಾಗೂ ಸಿಪಿವೈ ಹಲವು ವರ್ಷದ ಸ್ನೇಹಿತರೆನ್ನುವುದು ಬಹಿರಂಗ ಸತ್ಯ. 2023ರ ವಿಧಾನಸಭಾ ಚುನಾವಣೆ ಸಮಯದಲ್ಲಿಯೂ ಕಾಂಗ್ರೆಸ್ ಕರೆತರಲು ಉದಯ್ ಪ್ರಯತ್ನ ನಡೆಸಿದರಾದರೂ ಯೋಗೇಶ್ವರ್ ಮನಸ್ಸು ಮಾಡಿರಲಿಲ್ಲ.
ಕಾಂಗ್ರೆಸ್‌ಗೆ ಪೆಟ್ಟು ಕೊಟ್ಟಿರುವ ಎಚ್ಡಿಕೆ: 2018ರ ವಿಧಾನಸಭಾ ಚುನಾವಣೆ ಗೆಲುವಿನ ಬಳಿಕ ಹುಮ್ಮಸ್ಸಿನಲ್ಲಿದ್ದ ದಳಕ್ಕೆ ಕಾಂಗ್ರೆಸ್ ಹಂತ ಹಂತವಾಗಿ ಪೆಟ್ಟು ನೀಡುತ್ತಾ ಬಂದಿತ್ತು. ಪರಿಣಾಮ ಲೋಕಸಭೆ, ಕೆ.ಆರ್.ಪೇಟೆ ಉಪಚುನಾವಣೆ, ಎರಡು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ತಂತ್ರ ಲಿಸಿತ್ತು. ಅದೇ ಗೆಲುವನ್ನು ಮುಂದುವರೆಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿತ ಸೇರಿದಂತೆ ಆರು ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡು ದಳದ ಅಸ್ಥಿತ್ವಕ್ಕೆ ದೊಡ್ಡ ಹೊಡೆತವನ್ನು ಕಾಂಗ್ರೆಸ್ ನಾಯಕರು ನೀಡಿದ್ದರು.
ಅದೇ ರೀತಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಸೋಲಿಸಿ ಅಧಿಪತ್ಯ ಸ್ಥಾಪಿಸಿಕೊಳ್ಳಬೇಕೆಂದುಕೊಂಡಿದ್ದ ಕಾಂಗ್ರೆಸ್‌ಗೆ ಎಚ್ಡಿಕೆ ಅವಕಾಶ ಕೊಡಲಿಲ್ಲ. ನಿರೀಕ್ಷೆಗೂ ಮೀರಿದ ಸೋಲನ್ನು ಕಾಂಗ್ರೆಸ್ ಎದುರಿಸುವಂತಾಯಿತು. ಇದಾದ ಕೆಲವೇ ದಿನದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ‘ಕೈ’ ಮಕಾಡೆ ಮಲಗಿತು. ಈ ಸೋಲು ಕಾಂಗ್ರೆಸ್‌ನ ಭವಿಷ್ಯ ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ನಿಖಿಲ್ ಸೋಲಿಸಿದ್ದು ಇದೇ ನಾಯಕರು: ಹಾಗೆ ನೋಡಿದರೆ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ವೇಳೆ ಸೋಲುವಂತೆ ಮಾಡಿದ್ದು ಕಾಂಗ್ರೆಸ್ ನಾಯಕರು. ಅಂದು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾಗ ಎಚ್.ಡಿ.ಕುಮಾರಸ್ವಾಮಿ ಮೇಲಿನ ಸಿಟ್ಟಿಗೆ ‘ಕೈ’ ನಾಯಕರು ಚುನಾವಣೆಗೆ ಬೆನ್ನು ತೋರಿಸಿದರು. ಪರೋಕ್ಷವಾಗಿ ಸುಮಲತಾ ಪರವಾಗಿದ್ದರು. ಪರಿಣಾಮ ಸೋಲು ಕಾಣುವಂತಾಗುವುದರ ಜತೆಗೆ ಎಚ್‌ಡಿಕೆ ಅವರಿಗೆ ದೊಡ್ಡ ಹಿನ್ನಡೆಯಾಗುವಂತಾಗಿತ್ತು. ಆ ಚುನಾವಣೆಯಲ್ಲಿ ನಿಖಿಲ್ ಪರ ಕಾಂಗ್ರೆಸ್ ಕೆಲಸ ಮಾಡಲಿಲ್ಲ ಎನ್ನುವುದನ್ನು ಇತ್ತೀಚೆಗೆ ಸರ್ಕಾರದ ನಾಯಕರೇ ಬಹಿರಂಗವಾಗಿ ಒಪ್ಪಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಂಡ್ಯ ಎಚ್ಡಿಕೆ ರಾಜಕೀಯ ನೆಲೆ?: ಸಧ್ಯದ ಪರಿಸ್ಥಿತಿಯಲ್ಲಿ ಎಚ್ಡಿಕೆ ಅವರಿಗೆ ಮಂಡ್ಯ ರಾಜಕೀಯವಾಗಿ ನೆಲೆ ಕೊಟ್ಟಿದೆ. ಮಾತ್ರವಲ್ಲದೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವಂತೆ ಮಾಡಿದೆ. ಇದಕ್ಕೂ ಮೊದಲು ಅಂದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸಿ ಎಚ್ಡಿಕೆ ಸಿಎಂ ಆಗಲು ಜಿಲ್ಲೆಯ ಜನರು ಕಾರಣರಾಗಿದ್ದರು.
ಇದಷ್ಟೇ ಅಲ್ಲದೆ ಎಚ್ಡಿಕೆ ಜಿಲ್ಲೆಯಲ್ಲಿ ರಾಜಕಾರಣ ಪ್ರಾರಂಭಿಸಿದ ಬಳಿಕ ಹಲವು ಲೆಕ್ಕಾಚಾರ ನಡೆಯುತ್ತಿವೆ. ಅದರಂತೆ ಕುಮಾರಸ್ವಾಮಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರಿನಿಂದ ಕಣಕ್ಕಿಳಿಯುತ್ತಾರೆನ್ನುವ ಮಾತಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಅಸ್ಥಿರಗೊಳಿಸಲು ಹಾಗೂ ಕಳೆದ ಎರಡು ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳಲು ಜಿಲ್ಲೆಯ ಕಾಂಗ್ರೆಸ್ ನಾಯಕರು ಹಠ ತೊಟ್ಟಂತೆ ಕಾಣುತ್ತಿದೆ. ಅದರಂತೆ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿಪಿವೈ ಪರ ಮತಬೇಟೆಗಿಳಿಯಲಿದ್ದಾರೆ.
ಇನ್ನು ಇತ್ತ ದಳದಲ್ಲಿಯೂ ಕೂಡ ಚನ್ನಪಟ್ಟಣದ ಚುನಾವಣೆಯಲ್ಲಿ ನಿಖಿಲ್‌ಕುಮಾರಸ್ವಾಮಿ ಪರ ಮತಯಾಚಿಸಲು ತಂಡ ಸಿದ್ಧವಾಗುತ್ತಿವೆ. ಅದರಲ್ಲಿಯೂ ಯುವ ಕಾರ್ಯಕರ್ತರು ಅದಾಗಲೇ ಬೊಂಬೆನಾಡಿನತ್ತ ತೆರಳುತ್ತಿದ್ದಾರೆ.