ಕುಮಾರಸ್ವಾಮಿ ಗೆದ್ದ ಮೇಲೆ ಮಂಡ್ಯ ಜನರ ನೆಮ್ಮದಿ ಹಾಳು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಕಿಡಿ

mysore
Published on

ಮೈಸೂರು: ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಗೆದ್ದಾಗಿನಿಂದ ಮಂಡ್ಯದ ಜನರ ನೆಮ್ಮದಿ ಹಾಳಾಗಿದೆ. ಆ ಜನರು ಮುಂದೆಯೂ ನೆಮ್ಮದಿಯಿಂದ ಇರುವುದಕ್ಕೆ ಬಿಡುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಪಾದಿಸಿದರು.


ಕೋಮುವಾದಿ ಪಕ್ಷ ಬಿಜೆಪಿಯೊಂದಿಗೆ ಸೇರಿ ಗೆದ್ದು ಕೇಂದ್ರದಲ್ಲಿ ಸಚಿವರಾಗಿರುವ ಕುಮಾರಸ್ವಾಮಿ ರಾಜ್ಯದಲ್ಲಿ ಕೋಮು ಕಿಡಿ ಹೊತ್ತಿಸುವುದನ್ನು ಬಿಡಬೇಕು. ಅವರ ಪ್ರಯೋಗಗಳಿಗೆ ತಕ್ಕ ಉತ್ತರವನ್ನು ಕೊಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಪ್ರಚೋದಿಸುತ್ತಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಂಎಲ್‌ಸಿ ಸಿ.ಟಿ.ರವಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಗೆ ಈ ನಾಲ್ವರೇ ಕಾರಣ. ರಾಜ್ಯದಲ್ಲಿ ಶಾಂತಿ ಕಾಪಾಡಲು ಈ ನಾಲ್ವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.


ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರು ಕೂಡ, ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿ ಮಾಡುವಂತೆ ಬಿಜೆಪಿಯ ಮುಖಂಡರಿಗೆ ಸೂಚಿಸಿದ್ದರು. ಅದನ್ನು ನಾಗಮಂಗಲದ ಮೂಲಕ ಈಡೇರಿಸುವ ಯತ್ನವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.


ನಾಗಮಂಗಲ ಗಲಾಟೆಯಲ್ಲಿ ಯಾವ ಧರ್ಮದವರಿದ್ದರೂ ಬಿಡಬಾರದು. ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಪ್ರಕರಣ ದಾಖಲಿಸುವಾಗ ಹಿಂದುಗಳನ್ನಷ್ಟೆ ಗುರಿ ಮಾಡಿಲ್ಲ. ಮುಸ್ಲಿಮರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದರು.


ನಾಗಮಂಗಲದಲ್ಲಿ ಮಧ್ಯರಾತ್ರಿಯಲ್ಲಿ ಒಂದೂವರೆಗೂ ಮೆರವಣಿಗೆ ಮಾಡಲಾಗಿದೆ. ಪೊಲೀಸರ ಅನುಮತಿಯೂ ಇರಲಿಲ್ಲ. ಮೆರವಣಿಗೆಯಲ್ಲಿದ್ದವರು ಮಸೀದಿಯ ಎದುರಲ್ಲೇ ನಿಂತು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಕುಮ್ಮಕ್ಕು ಕೊಟ್ಟವರ‌್ಯಾರು? ಇದಕ್ಕೆ ಕಾರಣವಾದವರು ಯಾರು? ಇದನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು.


ಅಲ್ಲಿ ಎರಡೂ ಸಮುದಾಯದವರೂ ಕಲ್ಲು ತೂರಿದ್ದಾರೆ ಹಾಗೂ ಕತ್ತಿ ಹಿಡಿದಿದ್ದಾರೆ. ಮಸೀದಿಯ ಎದುರಿನಲ್ಲೇ ನಿಂತು, ಅಲ್ಲೇ ಪಟಾಕಿ ಸಿಡಿಸಿ ಪ್ರಚೋದಿಸಬೇಕು ಎಂಬ ಪೂರ್ವಯೋಜಿತ ಕೃತ್ಯ ಇದಾಗಿತ್ತು ಎಂದು ದೂರಿದರು.


ನಾಗಮಂಗಲದಲ್ಲಿ ಲೋಪ ಆಗಿರುವ ಬಗ್ಗೆ ಅಲ್ಲಿನ ಇನ್‌ಸ್ಪೆಕ್ಟರ್‌ನನ್ನು ಅಮಾನತು ಮಾಡಲಾಗಿದೆ. ತಪ್ಪಿತಸ್ಥರು ಯಾವುದೇ ವರ್ಗದವರಾಗಿದ್ದರೂ ಕ್ರಮ ತೆಗೆದುಕೊಳ್ಳಬೇಕು. ದೇಶದಲ್ಲಿರುವ ಎಲ್ಲರೂ ಭಾರತ ಮಾತೆಯ ಮಕ್ಕಳೇ. ಅವರನ್ನು ಧರ್ಮದ ಆಧಾರದ ಮೇಲೆ ವಿಂಗಡಿಸಿ ನೋಡುವ ಕೆಲಸವನ್ನು ಬಿಜೆಪಿ ಮೊದಲು ಬಿಡಬೇಕು. ಗಣೇಶನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಹರಿಹಾಯ್ದರು.


ನಾಗಮಂಗಲಕ್ಕೆ ಮಂಗಳೂರು ಮೊದಲಾದ ಕಡೆಗಳಿಂದ ಬಂದಿರುವ ಆರ್‌ಎಸ್‌ಎಸ್‌ನವರು ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದು ಗಣೇಶ ಹಬ್ಬದ ದಿನ ಗಲಭೆ ಸೃಷ್ಟಿ ಮಾಡುವ ಹುನ್ನಾರ ಮಾಡಲಾಗಿತ್ತು. ನಾಗಮಂಗಲಕ್ಕಿಂತ ಮೊದಲು ಮೈಸೂರಿನಲ್ಲಿ ಕೋಮು ಗಲಭೆ ಮಾಡಲು ಯೋಜನೆ ರೂಪಿಸಲಾಗಿತ್ತು. ಅದು ವಿಫಲವಾಗಿದೆ ಎಂದು ಆರೋಪಿಸಿದರು.


ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ 757 ಕೋಮುಗಲಭೆ ನಡೆದಿವೆ. ಕೋಮು ಗಲಭೆಯಲ್ಲಿ ಹಿಂದು ಸಂಘಟನೆ ಕುಮ್ಮಕ್ಕೇ ಹೆಚ್ಚು ಇದೆ. ರಾಜ್ಯದಲ್ಲೂ 21 ಯುವಕರು ಮೃತಪಟ್ಟಿದ್ದಾರೆ. ಅವರೆಲ್ಲ ಬಿಲ್ವಾ ಸಮುದಾಯದವರಾಗಿದ್ದಾರೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡುವುದು ಬಿಜೆಪಿ ಉದ್ದೇಶ. ಹಿಂದುಗಳ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು


ಉತ್ತರ ಪ್ರದೇಶದಲ್ಲಿ ನಿತ್ಯ 7ರಿಂದ 8 ಅತ್ಯಾಚಾರ, ಕೋಮುಗಲಭೆ ಆಗುತ್ತಿದೆ. ಇದು ಬಿಜೆಪಿ ಅವರಿಗೆ ಕಾಣಿಸುತ್ತಿಲ್ಲ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net