

ಮಂಡ್ಯ: ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಅಂಗವಿಕಲರು ಆರ್ಥಿಕವಾಗಿ ಸಬಲರಾಗಬೇಕು ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಸಲಹೆ ನೀಡಿದರು.
ಇಲ್ಲಿನ ನಗರಸಭೆ ಆವರಣದಲ್ಲಿ ನಗರಸಭೆಯ ಶೇ.5ರಷ್ಟು ಅನುದಾನದಡಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದರು. ಅಂಗವಿಕಲರ ಅನುಕೂಲಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗಕ್ಕೆ ಮುಂದಾಗಬೇಕು. ಈ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ನಗರಸಭೆ ಸದಾ ನಿಮ್ಮೊಂದಿಗರುತ್ತದೆ. ನಿಮ್ಮ ಕುಂದು ಕೊರತೆಗಳೇನಿದ್ದರೂ ಇದ್ದಲ್ಲಿ ತಮ್ಮ ಗಮನಕ್ಕೆ ತನ್ನಿ. ಅಂಗವಿಕಲರು ಸ್ವಯಂ ಉದ್ಯೋಗ ಮಾಡಲು ಸಾಲ ಪಡೆದರೆ ನಗರಸಭೆಯಿಂದ ಪ್ರೋತ್ಸಾಹಧನ ನೀಡಲಾಗುವುದು ಎಂದರು.
ನಗರಸಭೆಗೆ ಬರುವ ಅನುದಾನದ ಶೇ.5ರಷ್ಟನ್ನು ಅಂಗವಿಕಲರಿಗೆ ಮೀಸಲಿಡಲಾಗಿದೆ. ಕಳೆದ ಕೆಲ ವರ್ಷದಿಂದ ಬಂದ ಅನುದಾನದಲ್ಲಿ ಅಂಗವಿಕಲರಿಗೆ ಯಾವುದೇ ಸೌಲಭ್ಯ ನೀಡಿರಲಿಲ್ಲ. ಆದ್ದರಿಂದ ಅವರಿಗೆ ಅನುಕೂಲ ಕಲ್ಪಿಸಿಕೊಡುವ ಸಲುವಾಗಿ ನಗರಸಭೆ ವ್ಯಾಪ್ತಿಯ ಅರ್ಹ 25 ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ ಅಂಬರೀಷ್, ನಗರಸಭೆ ಸದಸ್ಯರಾದ ಪೂರ್ಣಿಮಾ, ನಯಿಂ, ಶ್ರೀಧರ್, ಪೌರಾಯುಕ್ತ ಆರ್.ಮಂಜುನಾಥ ಇತರರಿದ್ದರು.