ಫೆ.7ರಂದು ಮಂಡ್ಯ ನಗರ ಬಂದ್: ಸಮಾನ ಮನಸ್ಕರ ವೇದಿಕೆ ಸದಸ್ಯ ಎಂ.ಬಿ.ನಾಗಣ್ಣಗೌಡ ಮಾಹಿತಿ

Mandya Nagar bandh related press conference mandya
Published on

ಮಂಡ್ಯ: ಜಿಲ್ಲೆಯ ಸೌಹಾರ್ದ ಮತ್ತು ಶಾಂತಿಯನ್ನು ಕದಡುತ್ತಿರುವ ಶಕ್ತಿಗಳ ವಿರುದ್ಧ ಫೆ.7ರಂದು ಮಂಡ್ಯ ನಗರ ಬಂದ್ ಮಾಡಲಾಗುವುದು ಎಂದು ಸಮಾನ ಮನಸ್ಕರ ವೇದಿಕೆ ಸದಸ್ಯ ಎಂ.ಬಿ.ನಾಗಣ್ಣಗೌಡ ತಿಳಿಸಿದರು.

ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯ ಸೌಹಾರ್ದ ಪರಂಪರೆಗೆ ಮಸಿ ಬಳಿದು, ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸುತ್ತಿರುವ ಶಕ್ತಿಗಳ ವಿರುದ್ಧ ಬಂದ್ ಮಾಡಲಾಗುವುದು. ಈ ಮೂಲಕ ಜಿಲ್ಲೆಯನ್ನು ಸೌಹಾರ್ದದ ನೆಲೆಯಾಗಿ ಉಳಿಸಿಕೊಳ್ಳುತ್ತೇವೆ ಎಂಬ ಸಂದೇಶ ಕೊಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಂಡ್ಯ ನಗರವನ್ನು ಸ್ವಯಂಪ್ರೇರಿತ ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಬೇಕು. ಅಂದು ರಾಷ್ಟ್ರಧ್ವಜವನ್ನು ಹಿಡಿದು ಬೃಹತ್ ಮೆರವಣಿಗೆ ನಡೆಸಿ ಶಾಂತಿ ಮತ್ತು ಸೌಹಾರ್ದ ಕಾಪಾಡಿಕೊಳ್ಳಲು ಜನತೆಯಲ್ಲಿ ಮನವಿ ಮಾಡಿಕೊಳ್ಳಲಾಗುವುದು. ಕಾನೂನು ಮುರಿಯುವ ಮತ್ತು ಶಾಂತಿ ಕದಡುವ ಶಕ್ತಿಗಳ ಮೇಲೆ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ರಾಷ್ಟ್ರ ಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ ವಿಕೃತ ಮನಸ್ಸಿನ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕುರುಬ ಸಮುದಾಯ ನಡೆಸುತ್ತಿರುವ ವಿದ್ಯಾರ್ಥಿ ನಿಲಯದ ಮೇಲೆ ದಾಳಿ ಮಾಡಿದ ಕೃತ್ಯ ಖಂಡನೀಯ. ಒಂದು ಸಮುದಾಯ ನಡೆಸುವ ಹಾಸ್ಟೆಲ್‌ಗೆ ಅಕ್ರಮವಾಗಿ ನುಗ್ಗಿ ದಾಂಧಲೆ ನಡೆಸಿ ಪ್ಲೆಕ್ಸ್ ಹರಿದು ಹಾಕಿರುವುದು ಪುಂಡಾಟಿಕೆಯ ಮತ್ತು ವಿವಿಧ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ದುವರ್ತನೆಯಾಗಿದೆ. ಇಂತಹ ಪುಂಡರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಮಾನ ಮನಸ್ಕರ ವೇದಿಕೆಯ ಲಕ್ಷ್ಮಣ್ ಚೀರನಹಳ್ಳಿ, ಟಿ.ಎಲ್.ಕೃಷ್ಣೇಗೌಡ, ಬಿ.ಬೊಮ್ಮೇಗೌಡ, ಸಿ.ಕುಮಾರಿ, ಟಿ.ಎಲ್.ಕೃಷ್ಣೇಗೌಡ, ಟಿ.ಡಿ.ಬಸವರಾಜ್, ಸಿದ್ದರಾಜು, ಎಚ್.ಡಿ.ಜಯರಾಂ, ಕೆಂಪಣ್ಣ ಸಾಗ್ಯಾ, ಎಂ.ವಿ.ಕೃಷ್ಣ, ನರಸಿಂಹಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net