ಮಿಮ್ಸ್‌ಗೆ ಬಿ.ಜೆ.ಮಹೇಂದ್ರ ನೂತನ ಸಾರಥಿ

Mims
Published on

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ನೂತನ ನಿರ್ದೇಶಕರಾಗಿ ಡಾ.ಬಿ.ಜೆ.ಮಹೇಂದ್ರ ಶನಿವಾರ ಅಧಿಕಾರ ವಹಿಸಿಕೊಂಡರು.
ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಉಪಕುಲಸಚಿವರಾಗಿದ್ದ ಡಾ.ಬಿ.ಜೆ.ಮಹೇಂದ್ರ ಅವರನ್ನು ರಾಜ್ಯ ಸರ್ಕಾರ ಮಿಮ್ಸ್‌ನ ನೂತನ ನಿರ್ದೇಶಕರಾಗಿ ನೇಮಿಸಿದೆ. ಈ ಹಿನ್ನೆಲೆಯಲ್ಲಿ ಪ್ರಭಾರಿ ನಿರ್ದೇಶಕರಾಗಿದ್ದ ಡಾ.ಎಂ.ಆರ್.ಹರೀಶ್ ಅಧಿಕಾರ ಹಸ್ತಾಂತರ ಮಾಡಿದರು. 2012ರಲ್ಲಿ ಮಿಮ್ಸ್‌ನ ಸಮೂಹ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದ ಬಿ.ಜೆ.ಮಹೇಂದ್ರ ಅವರು ಆ ವೇಳೆ ಹತ್ತು ದಿನ ಪ್ರಭಾರ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು. ಇದಾದ ನಂತರ ಮಡಿಕೇರಿಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಉಪಕುಲಸಚಿವರಾಗಿ ವರ್ಗಾವಣೆಗೊಂಡಿದ್ದರು.
ಇನ್ನು ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ಈ ಹಿಂದೆ ಮಿಮ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಇಲ್ಲಿನ ತಂಡ ನನಗೆ ಚಿರಪರಿಚಿತ. ಮಿಮ್ಸ್‌ನ ಪ್ರಾಧ್ಯಾಪಕರು, ವೈದ್ಯರು, ಸಿಬ್ಬಂದಿ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆನ್ನುವ ವಿಶ್ವಾಸವಿದೆ. ಅಂತೆಯೇ ಮುಂದಿನ ದಿನದಲ್ಲಿ ಒಗ್ಗಟ್ಟಿನಲ್ಲಿ ಕೆಲಸ ಮಾಡಿಕೊಂಡು ಹೋಗಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net